ಚಿಕ್ಕಮಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಧರಣಿ

Update: 2019-12-19 05:08 GMT


ಚಿಕ್ಕಮಗಳೂರು, ಡಿ.11: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಬಿ)ಯನ್ನು ವಿರೋಧಿಸಿ ಜಿಲ್ಲೆಯ ವಿವಿಧ ಮುಸ್ಲಿಂ ಸಂಘ ಸಂಸ್ಥೆಗಳ ಮುಖಂಡರು ಬುಧವಾರ ನಗರದಲ್ಲಿ ಧರಣಿ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು. 

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ವಿವಿಧ ಸಂಘಟನೆಗಳ ಮುಖಂಡರು ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿ ವಿರುದ್ಧ ಘೋಷಣೆ ಕೂಗಿ ಕೇಂದ್ರ ಸರಕಾರ ಈ ಕಾಯ್ದೆಯನ್ನು ಅಲ್ಪಸಂಖ್ಯಾತರ ವಿರುದ್ಧವಾಗಿ, ಧರ್ಮಾಧಾರಿತವಾಗಿ ಈ ಕಾಯ್ದೆಯನ್ನು ಜಾರಿ ಮಾಡುತ್ತಿದ್ದು, ಯಾವುದೇ ಕಾರಣಕ್ಕೂ ಕಾಯ್ದೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಮೂಲಕ ಸಿಎಬಿ ಕಾಯ್ದೆ ಜಾರಿ ಮಾಡುತ್ತಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಭಾರತದ ಜಾತ್ಯತೀತ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಮುಸ್ಲಿಂ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದ ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನು ಕಸಿಯುವಂತಹ ಪೌರತ್ವ ತಿದ್ದುಪಡಿ ಕಾಯ್ದೆಯು ವಿವಿಧ ಸಮಾಜಗಳ ನಡುವೆ ಕಂದಕ ಉಂಟು ಮಾಡುಲಿದೆ ಎಂದು ಮನವಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಕಾಯ್ದೆಯು ಅವೈಜ್ಞಾನಿಕವೂ, ಮಾನವೀಯ ಮೌಲ್ಯಕ್ಕೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಟೀಕಿಸಿರುವ ಮುಖಂಡರು, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ಮುಂತಾದ ದೇಶಗಳಿಂದ ಭಾರತಕ್ಕೆ ವಲಸೆ ಬಂದು ವಾಸಿಸುತ್ತಿರುವ ನಿರಾಶ್ರಿತರ ಪೈಕಿ ಕೇವಲ ಮುಸ್ಲಿಂ ಸಮುದಾಯವನ್ನು ಗುರಿ ಮಾಡುವಂತಹ ಕಾಯ್ದೆಯು ಭಾರತದ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ. ಕಾಯ್ದೆಯು ಕೋಮುವಾದಿ ನೀತಿಯನ್ನು ಪ್ರತಿಪಾದಿಸುವ ಉದ್ದೇಶ ಹೊಂದಿದೆ. ಆದ್ದರಿಂದ ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ಸಿಎಬಿ ಕಾಯ್ದೆಯನ್ನು ದೇಶದ ಪ್ರಜ್ಞಾವಂತ ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದು, ದೇಶದ ಏಕತೆ, ಮೂಲಭೂತ ಹಕ್ಕುಗಳ ವಿರುದ್ಧವಾಗಿರುವ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಮನವಿಯಲ್ಲಿ ಕೋರಲಾಗಿದೆ.

ಧರಣಿಯಲ್ಲಿ ಜಮಾಅತೆ ಇಸ್ಲಾಮಿಯಾ ಹಿಂದ್, ಇಮಾಮ್ ಕೌನ್ಸಿಲ್, ಅಂಜುಮನ್-ಎ-ಇಸ್ಲಾಮಿಯಾ, ತಂಝಿಮುಲ್ ಇಸ್ಲಾಂ, ಮುತವಲ್ಲಿ ಯಾನೆ ಮಸಾಝಿದ್, ಬ್ಯಾರಿ ಒಕ್ಕೂಟ, ಇಸ್ಲಾಮಿ ಬೈತುಲ್‍ಮಾಲ್ ಸೇರಿ ಹಲವು ಸಂಘಟನೆಗಳು ಭಾಗವಹಿಸಿದ್ದವು.

ವಿವಿಧ ಸಂಘಟನೆಗಳ ಮುಖಂಡರಾದ ರಿಝ್ವಾನ್ ಖಾಲಿದ್, ಗಫಾರ್ ಬೇಗ್, ಕೆ.ಮುಹಮ್ಮದ್, ಗೌಸ್ ಮುನೀರ್, ನಝೀರ್ ಅಹ್ಮದ್, ನಸ್ರುಲ್ಲಾ ಶರೀಫ್, ಮುಫ್ತಿ ಅಸ್ಗರ್, ಯೂಸುಫ್ ಹಾಜಿ, ಮೌಲಾನಾ ರೌಫ್, ಮೌಲಾನಾ ಅಶ್ರಫ್, ಮಹ್ಮದ್ ಶಾಹಿದ್, ಫೈರೋಝ್, ಆರೀಫ್, ಬಿ.ಅಮ್ಝದ್, ಜಮೀಲ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News