ದೇಶ ಕಟ್ಟುವ ಶಿಕ್ಷಕರು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ: ಸಚಿವ ಸಿ.ಟಿ.ರವಿ

Update: 2019-12-11 11:49 GMT

ಚಿಕ್ಕಮಗಳೂರು, ಡಿ.11: ಮಕ್ಕಳಿಗೆ ಅರಿವು ಮೂಡಿಸಲು ಹಾಗೂ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದರು.

ನಗರದ ಟಿ.ಎಂ.ಎಸ್ ಶಾಲೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕು ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಗುರು ಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಾಮಾಜಿಕ ಮೌಲ್ಯಗಳನ್ನು ತಿಳಿಸುವುದರ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಶಿಕ್ಷಕರು ವಿದ್ಯಾರ್ಥಿಗಳ ಪಾಲಿಗೆ ದೇವರಾಗುತ್ತಾರೆ ಎಂದರು.

ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷರುಗಳಿಗೆ ಇಂದು ಅನೇಕ ಸಮಸ್ಯೆಗಳು ಎದುರಾಗಿವೆ. ಶಿಕ್ಷಕರಿಗೆ ಕಡಿಮೆ ವೇತನ ಸಿಗುತ್ತಿದ್ದ ಕಾಲದಲ್ಲಿ ಹೆಚ್ಚು ಗೌರವ ಸಿಗುತ್ತಿತ್ತು. ಆದರೆ ಇಂದು ಶಿಕ್ಷಕರಿಗೆ ಸಿಗಬೇಕಾದ ಸಾಮಾಜಿಕ ಗೌರವ, ಮೂಲಭೂತ ಸೌಕರ್ಯಗಳು ಸಿಗದಿರುವುದು ಗಂಭೀರ ಚಿಂತನೆಗೆ ಎಡೆ ಮಾಡಿದೆ. ಶಿಕ್ಷಕರ ಕುಂದುಕೊರತೆಗಳನ್ನು ಸರಿಪಡಿಸಲು ಶಿಕ್ಷಣ ಇಲಾಖೆ ಉತ್ತಮ ವೇದಿಕೆಯನ್ನು ಕಲ್ಪಿಸಿದೆ. ಉನ್ನತ ಮಟ್ಟದ ಶಿಕ್ಷಣಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಒಳಗೊಂಡಂತೆ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಶಿಕ್ಷಣ ಅದಾಲತ್‍ಗಳನ್ನು ನಡೆಸಬೇಕು ಎಂದು ಹೇಳಿದರು.

ಶಿಕ್ಷಕರ ಸಂಘಟನೆಗಳು ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಅಸ್ತಿತ್ವದಲ್ಲಿರಬೇಕೇ ಹೊರತು ಶಿಕ್ಷಕರಲ್ಲಿ ರಾಜಕಾರಣ ಹಾಗೂ ಒಡಕು ಉಂಟು ಮಾಡುವುದಕ್ಕಲ್ಲ. ಎಲ್ಲರೂ ಒಟ್ಟಾಗಿ ಮಕ್ಕಳಿಗಾಗಿ ಶಾಲೆ, ಶಾಲೆಗಾಗಿ ಶಿಕ್ಷಕರು ಎಂಬಂತೆ ಕಾರ್ಯ ನಿರ್ವಹಿಸಬೇಕು. ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಮುಖ್ಯ ಭಾಗವಾಗಿಸದೇ ಶಿಕ್ಷಣದ ಭಾಗವಾಗಿ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿರುವ ಗಡಿಕಾಯುವ ಸೈನಿಕರಂತೆ ಕಾರ್ಯ ನಿರ್ವಹಿಸಬೇಕು. ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಜಸಿಂತಾ ಅನಿಲ್ ಕುಮಾರ್ ಮಾತನಾಡಿ, ಅನೇಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಕೊರತೆ ಕಂಡು ಬಂದಿದ್ದು, ಸಹಶಿಕ್ಷಕರನ್ನು ಮುಖ್ಯ ಶಿಕ್ಷಕರನ್ನಾಗಿ ನೇಮಕ ಮಾಡಬೇಕು ಹಾಗೂ ಎಲ್ಲಾ ಶಿಕ್ಷಕರು ಸಹಕಾರದೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಕೆಲವು ಭಾಗಗಳಲ್ಲಿ ಮಹಿಳಾ ಶಿಕ್ಷಕಿಯರಿಗೆ ಮಾನಸಿಕ ಒತ್ತಡಗಳಾಗುತ್ತಿದ್ದು, ಕೆಲಸ ನಿರ್ವಹಿಸಲು ಆಗದೆ ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಆಸ್ಪದ ಕೊಡದೆ ನೀವು ಕಾರ್ಯ ನಿರ್ವಹಿಸುತ್ತಿರುವ ಜಾಗದಲ್ಲಿ ಯಾವುದೇ ಒತ್ತಡಗಳಿಲ್ಲದೇ ಉತ್ತಮ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ ನೆಟ್ಟೆಕೆರೆಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಮೇಲಧಿಕಾರಿಗಳಿಗೆ ತಿಳಿಸಬೇಕು ಹಾಗೂ ಶಿಕ್ಷಕರ ವರ್ಗಾವಣೆ, ವೇತನ ವಿಳಂಬ ಇಂತಹ ಮುಖ್ಯ ಕುಂದು ಕೊರತೆಗಳನ್ನು ಬಗೆಹರಿಸುವಲ್ಲಿ ಶಿಕ್ಷಣ ಇಲಾಖೆ ಗಮನಹರಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರಾದ ಸಿ.ಟಿ ರವಿ ಅವರ ಮುಂದೆ ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿ ಕಿರಣ್ ಕುಮಾರ್ ಶಿಕ್ಷಕರ ಬೇಡಿಕೆಗಳನ್ನಿಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಬೆಳವಾಡಿ, ಬಿ.ಜಿ. ಸೋಮಶೇಖರ್, ತಾಪಂ ಸದಸ್ಯರಾದ ಸಿದ್ದಾಪುರ ರಮೇಶ್, ವೈ.ಜಿ.ಸುರೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ರವಿಕುಮಾರ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್ ಪರಮೇಶ್ವರಪ್ಪ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News