'ಸಂಪುಟ ವಿಸ್ತರಣೆ' ಬಗ್ಗೆ ಸ್ಪಷ್ಟಣೆ ನೀಡಿದ ಸಚಿವ ಆರ್.ಅಶೋಕ್

Update: 2019-12-11 12:11 GMT

ಬೆಂಗಳೂರು, ಡಿ. 11: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆಯೆ ಹೊರತು ಯಾವುದೇ ಕಾರಣಕ್ಕೂ ಸಂಪುಟ ಪುನಾರಚನೆ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಾಲಿ ಇರುವ ಸಂಪುಟ ಸಚಿವರ ಖಾತೆಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ, ಹೆಚ್ಚುವರಿಯಾಗಿರುವ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಈಗಿರುವ ಮೂರು ಉಪಮುಖ್ಯಮಂತ್ರಿ ಹುದ್ದೆ ರದ್ದುಗೊಳಿಸುವ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ ಎಂದು ಆರ್.ಅಶೋಕ್ ಇದೇ ಸಂದರ್ಭದಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಉಪಚುನಾವಣೆ ಪ್ರಚಾರದ ವೇಳೆ ಯಾವ ಕ್ಷೇತ್ರದಲ್ಲಿ ಏನೇನು ಭರವಸೆ ನೀಡಿದ್ದಾರೆಯೋ ಅವುಗಳನ್ನು ಈಡೇರಿಸಲಿದ್ದಾರೆ ಎಂದ ಆರ್.ಅಶೋಕ್, ಬಿಎಸ್‌ವೈ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ನೂತನ ಶಾಸಕರು ಯಾರೂ ತನಗೆ ಇಂತಹ ಖಾತೆಯೇ ಬೇಕು ಎಂದು ಬೇಡಿಕೆ ಇಟ್ಟಿಲ್ಲ. ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

11 ಮಂದಿಗೂ ಸಚಿವ ಸ್ಥಾನ: ಉಪಚುನಾವಣೆಯಲ್ಲಿ ಆಯ್ಕೆಯಾದ 11 ಮಂದಿ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದು, ಉಳಿದವರಿಗೆ ವರಿಷ್ಠರೊಂದಿಗೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ನೂತನ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News