ತನ್ನ ಗೆಲುವಿನ ಹಿಂದೆ 'ತಂದೆಯ ಬೆಂಬಲ'ದ ಬಗ್ಗೆ ಶರತ್ ಬಚ್ಚೇಗೌಡ ಹೇಳಿದ್ದೇನು ?

Update: 2019-12-11 13:55 GMT

ಬೆಂಗಳೂರು, ಡಿ.11: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸಂಸದರಾಗಿರುವ ನನ್ನ ತಂದೆ ಬಿ.ಎನ್.ಬಚ್ಚೇಗೌಡರು, ನನಗೆ ಬೆಂಬಲ ನೀಡಿದ್ದಾರೆ ಎಂದು ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಅವರು ಯಾವತ್ತೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ ಎಂದು ನೂತನ ಶಾಸಕ ಶರತ್ ಬಚ್ಚೇಗೌಡ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಹೊಸಕೋಟೆಯಲ್ಲಿರುವ ತಮ್ಮ ಕಚೇರಿಯಲ್ಲಿ ಬೆಂಬಲಿಗರು ಹಾಗೂ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಚ್ಚೇಗೌಡರು ಚುನಾವಣೆ ಸಂದರ್ಭದಲ್ಲಿ ಒಮ್ಮೆಯೂ ನನ್ನ ಪರವಾಗಿ ಪ್ರಚಾರ ಮಾಡಿಲ್ಲ. ಯಾವುದೇ ರೀತಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿಲ್ಲ ಎಂದರು.

ಹೊಸಕೋಟೆ ಕ್ಷೇತ್ರದ ಮತದಾರರು ಅನರ್ಹ ಶಾಸಕರನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ತಿರಸ್ಕರಿಸಿ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನನ್ನನ್ನು ಕ್ಷೇತ್ರದ ಹಿತ ಹಾಗೂ ಅಭಿವೃದ್ಧಿಗಾಗಿ 11 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಎಂದು ಶರತ್ ಬಚ್ಚೇಗೌಡ ಹೇಳಿದರು.

ಬಿಜೆಪಿ ನಾಯಕರು ನನ್ನನ್ನು ಪುನಃ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿಕೆಗಳನ್ನು ನೀಡಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಕೀಯ ಬೆಳವಣಿಗೆಗಳನ್ನು ನೋಡಿಕೊಂಡು ನಾನು ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಅವರು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರಕಾರ ಎಂದು ಹೇಳುವ ಬದಲು ಜನರ ಸರಕಾರವಿರಬೇಕು. ಜನರೇ ಅವರನ್ನು(ಎಂಟಿಬಿ ನಾಗರಾಜ್) ಅನರ್ಹ ಎಂದು ತಿರಸ್ಕರಿಸಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇನೆ ಎಂದು ಶರತ್ ಬಚ್ಚೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News