ಬಿಎಸ್‌ವೈಗೆ ತಲೆನೋವು ತಂದ ನೂತನ ಶಾಸಕರ ಬೇಡಿಕೆಗಳು

Update: 2019-12-11 16:35 GMT

ಬೆಂಗಳೂರು, ಡಿ. 11: ಉಪಚುನಾವಣೆಯಲ್ಲಿ ಆಯ್ಕೆಯಾಗಿರುವ ಬಿಜೆಪಿಯ ನೂತನ ಶಾಸಕರು ಸಿಎಂ ಬಿಸ್‌ವೈ ಅವರನ್ನು ಭೇಟಿ ಮಾಡಿದ್ದು, ಸಂಪುಟ ವಿಸ್ತರಣೆ ವೇಳೆ ತಮಗೆ ಪ್ರಮುಖ ಖಾತೆಗಳನ್ನು ನೀಡಬೇಕೆಂದು ಆಗ್ರಹಿಸಿರುವುದು ಬಿಎಸ್‌ವೈ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಉಪಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಬಿಜೆಪಿಯ ನೂತನ ಶಾಸಕರು ಡಾಲರ್ಸ್‌ ಕಾಲನಿಯಲ್ಲಿನ ಸಿಎಂ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಚುನಾವಣೆಗೆ ಮೊದಲ ನೀಡಿದ ವಾಗ್ದಾನದಂತೆ ತಮಗೆ ಇಂಧನ, ಲೋಕೋಪಯೋಗಿ, ಕಂದಾಯ, ಗೃಹ ಇಲಾಖೆ ಸೇರಿ ಪ್ರಮುಖ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆಂದು ಗೊತ್ತಾಗಿದೆ.

ರಮೇಶ್ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಡಾ.ಕೆ.ಸುಧಾಕರ್, ಮಹೇಶ್ ಕುಮಟಳ್ಳಿ, ಬಿ.ಸಿ.ಪಾಟೀಲ್, ಕೆ.ನಾರಾಯಣ ಗೌಡ, ಕೆ.ಗೋಪಾಲಯ್ಯ ಸೇರಿದಂತೆ ನೂತನ ಶಾಸಕರು, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಅಲ್ಲದೆ, ಉಪಚುನಾವಣೆಯಲ್ಲಿ ಸೋತ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೂ ಸೂಕ್ತ ಸ್ಥಾನಮಾನ ನೀಡಬೇಕೆಂದು ಶಾಸಕರು ಆಗ್ರಹಿಸಿದ್ದಾರೆ. ಜತೆಗೆ ಉಮೇಶ್ ಕತ್ತಿ ಸೇರಿ ಬಿಜೆಪಿ ಹಿರಿಯರು ಸಚಿವ ಸ್ಥಾನಕ್ಕೆ ಒತ್ತಾಯಿಸುತ್ತಿರುವುದು ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಗಣಿಮಿಸಿದೆ.

ಪಟ್ಟು ಹಿಡಿದಿಲ್ಲ: ನಾವು ಯಾರೊಬ್ಬರೂ ಇಂತಹದ್ದೇ ಖಾತೆ ಬೇಕೆಂದು ಪಟ್ಟು ಹಿಡಿದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವುದೇ ಖಾತೆ ಕೊಟ್ಟರೂ ಅದನ್ನು ನಿರ್ವಹಿಸುತ್ತೇವೆ ಎಂದು ಯಶವಂತಪುರ ಕ್ಷೇತ್ರದ ನೂತನ ಶಾಸಕ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.

ಬುಧವಾರ ಬಿಎಸ್‌ವೈ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನಾವು 17 ಮಂದಿಯೂ ಒಗ್ಗಟ್ಟಾಗಿದ್ದೇವೆ. ಸೋತವರು ಸೇರಿದಂತೆ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ. ಪರಸ್ಪರ ಸಹಕಾರದಿಂದ ಇರುತ್ತೇವೆ. ಇಂತಹದ್ದೆ ಖಾತೆ ಬೇಕೆಂದು ಬೇಡಿಕೆ ಇಟ್ಟಿಲ್ಲ ಎಂದರು.

ನಾವು ಯಾರೊಂದಿಗೂ ಪೈಪೋಟಿ ನಡೆಸಿಲ್ಲ. ಅವರವರ ಸಾಮರ್ಥ್ಯ ಅನುಸಾರ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು ಎಂದರು. ಇದೇ ವೇಳೆ ರಾಯಚೂರಿನ ಮಸ್ಕಿ ಮತ್ತು ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ಉಪ ಚುನಾವಣೆ ವಿವಾದ ಬಗೆಹರಿಸಲು ಚರ್ಚಿಸಿದ್ದೇವೆ ಎಂದರು.

‘ಉಪಚುನಾವಣೆಯಲ್ಲಿ ಆಯ್ಕೆಯಾದ ನೂತನ ಶಾಸಕರೆಲ್ಲರೂ ಹೊಸದಿಲ್ಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದೇವೆ. ರಾಜ್ಯದ ಬಿಜೆಪಿ ಸರಕಾರ ಸುಭದ್ರವಾಗಿದ್ದು, ಮುಂದಿನ ದಿನಗಳಲ್ಲಿ ಜನತೆ ಅಪೇಕ್ಷೆಯಂತೆ ಉತ್ತಮ ಆಡಳಿತ ನಡೆಸಲಿದೆ’

-ಎಸ್.ಟಿ.ಸೋಮಶೇಖರ್, ನೂತನ ಶಾಸಕ

‘ನಾನು ಉಪಚುನಾವಣೆಯಲ್ಲಿ ಸೋತಿರಬಹುದು. ಆದರೆ, ಮೈತ್ರಿ ಸರಕಾರ ಪತನಗೊಳಿಸಬೇಕೆಂಬ ನಮ್ಮ ಉದ್ದೇಶ ಗೆದ್ದಿದೆ. ನಮಗೆ ಯಾವುದೇ ಸಚಿವ ಸ್ಥಾನದ ಮೇಲೆ ಕಣ್ಣಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನಮಗೆ ಹೈಕಮಾಂಡ್’

-ಎಚ್.ವಿಶ್ವನಾಥ್, ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News