ಎಚ್.ವಿಶ್ವನಾಥ್ ಸೋಲಿಗೆ ಸಿ.ಪಿ.ಯೋಗೇಶ್ವರ್ ಕಾರಣ: ಶಾಸಕ ಜಿ.ಟಿ.ದೇವೇಗೌಡ

Update: 2019-12-11 17:10 GMT

ಮೈಸೂರು,ಡಿ.11: ಅನರ್ಹ ಶಾಸಕ ಎಚ್.ವಿಶ್ವನಾಥ್ ಸೋಲಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾರಣ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಜಯಪುರ ಗ್ರಾಮದಲ್ಲಿ ವಿವಿಧ ಆಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹುಣಸೂರಿನಲ್ಲಿ ಒಕ್ಕಲಿಗ ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು. ಅವನ್ಯಾರು ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಅಂತೆಲ್ಲಾ ಏಕ ವಚನದಲ್ಲಿ ಮಾತನಾಡಿದ್ದರು. ದುಡ್ಡು, ಸೀರೆ, ಕುಕ್ಕರ್ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಇತ್ತು. 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮಾಡಿದರು. ಅದಕ್ಕಾಗಿಯೇ ವಿಶ್ವನಾಥ್ ಸೋಲಬೇಕಾಯಿತು ಎಂದು ಹೇಳಿದರು.

ಜಿ.ಟಿ.ದೇವೇಗೌಡ ಪಕ್ಷದ್ರೋಹಿ ಎಂಬ ಹೇಳಿಕೆ ವಿಚಾರಕ್ಕೆ ವಿಶ್ವನಾಥ್‍ಗೆ ತಿರುಗೇಟು ನೀಡಿದ ಅವರು, ಹುಣಸೂರಿನಲ್ಲಿ ವಿಶ್ವನಾಥ್ ಬೆಂಬಲಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ. ಇಡೀ ಚುನಾವಣೆಯಲ್ಲಿ ನಾನು ಭಾಗವಹಿಸಲ್ಲ ಅಂತ ಮೊದಲೇ ಹೇಳಿದ್ದೆ. ಅಂದ ಮೇಲೆ ಪಕ್ಷದ್ರೋಹ ಹೇಗಾಗುತ್ತೆ ? ನಾನು ಈಗಲೂ ತಟಸ್ಥನಾಗಿಯೇ ಇದ್ದೇನೆ. ನನ್ನ ಮಗ ಸ್ವತಂತ್ರನಿದ್ದಾನೆ. ಅವನು ಸ್ವತಂತ್ರ ನಿರ್ಧಾರ ಕೈಗೊಂಡಿದ್ದಾನೆ. ಸಿ.ಪಿ.ಯೋಗೇಶ್ವರ್ ಟೀಕೆ ನಂತರ ನನ್ನ ಮಗ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ನಿರ್ಧಾರ ಕೈಗೊಂಡಿದ್ದಾನೆ ಎಂದು ಹೇಳಿದರು.

ಎಚ್.ವಿಶ್ವನಾಥ್ ಹುಣಸೂರು ಕ್ಷೇತ್ರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು. ಅವರು ಎಲ್ಲಿಂದಲೋ ಬಂದವರು. ದೇವೇಗೌಡರು ಮತ್ತು ನಾನು ಒಟ್ಟಿಗೆ ಸೇರಿ ಗೆಲ್ಲಿಸಿಕೊಂಡಿದ್ದೆವು. ಆದರೆ ಅದನ್ನು ಉಳಿಸಿಕೊಳ್ಳಲು ವಿಶ್ವನಾಥ್ ಕೈಯಲ್ಲಿ ಆಗಲಿಲ್ಲ. ಹಳ್ಳಿ ಹಳ್ಳಿಯಲ್ಲಿ ಜನ ಆಕ್ರೋಶ ಹೊರಹಾಕಿದರು. ಗ್ರಾಮಗಳ ಒಳಗೆ ಬಿಟ್ಟುಕೊಳ್ಳಲಿಲ್ಲ ಎಂದು ಹೇಳಿದರು.

ನಾನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೀಮಿತವಾಗಿ ರಾಜಕೀಯ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಬಿಜೆಪಿ ಸರ್ಕಾರದಿಂದ  ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಕೊರತೆ ಆಗಿಲ್ಲ. ಸ್ಮಶಾನ, ಶಾಲೆ, ಅಂಗನವಾಡಿ, ಮಾದರಿ ವಿದ್ಯುತ್ ಗ್ರಾಮಗಳ ಅಭಿವೃದ್ದಿ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೊಟ್ಟಿದ್ದ ಯೋಜನೆಗಳು ಮುಕ್ತಾಯ ಆಗಿವೆ. ಕುಮಾರಸ್ವಾಮಿ ಸರ್ಕಾರದ ಯೋಜನೆಗಳು ಪ್ರಗತಿಯಲ್ಲಿವೆ. ಯಡಿಯೂರಪ್ಪ ಬಂದ ಮೇಲೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 16 ಕೋಟಿ ರೂ. ಅನುದಾನ ಸಿಕ್ಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News