ಅರಣ್ಯದಲ್ಲಿರುವ ಹುಲಿಯಂತೆ ಆಡಬೇಡಿ: ಸಬ್ ಇನ್‌ಸ್ಪೆಕ್ಟರ್‌ಗೆ ಹೈಕೋರ್ಟ್ ಕಿವಿಮಾತು

Update: 2019-12-11 18:01 GMT

ಬೆಂಗಳೂರು, ಡಿ.11: ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರಿಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕೆಂದು ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯನಗರ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ, ಅರಣ್ಯದಲ್ಲಿ ಇರುವ ಹುಲಿಯಂತೆ ಆಡಬೇಡಿ ಎಂದು ಕಿವಿಮಾತು ಹೇಳಿದೆ.

ಸ್ಥಿರಾಸ್ತಿ ವ್ಯಾಜ್ಯವೊಂದರಲ್ಲಿ ವಕೀಲರು ಪೊಲೀಸ್ ಠಾಣೆಗೆ ಖುದ್ದು ಹಾಜರಾಗಿ ದಾಖಲಾತಿ ನೀಡಬೇಕು ಎಂದು ವಕೀಲ ಬಿ.ಸುಧಾಕರ್ ಅವರಿಗೆ ವಿಜಯನಗರ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಸುಧಾಕರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ಇನ್ನು ನೀವು ಅಧಿಕಾರಿಯೇ ಆಗಿಲ್ಲ. ಆಗಲೇ ನೋಟಿಸ್ ನೀಡುವ ಮಟ್ಟಕ್ಕೆ ಬೆಳೆದಿದ್ದೀರಿ. ತಪ್ಪಿತಸ್ಥರು ನಿಮ್ಮ ಕೆಲಸವನ್ನು ನೋಡಿ ಹೆದರಬೇಕೇ ವಿನಹ ನೀವು ನೀಡುವ ನೋಟಿಸ್‌ನಿಂದಲ್ಲ. ನೀವು ಅರಣ್ಯದಲ್ಲಿ ಇರುವ ಹುಲಿಯಂತೆ ಆಡುವುದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಿ ಎಂದು ವಿಜಯನಗರ ಸಬ್ ಇನ್‌ಸ್ಪೆಕ್ಟರ್ ಜಿ.ಎಚ್.ಸಂತೋಷ್‌ಗೆ ಕಿವಿ ಮಾತು ಹೇಳಿತು.  ಅಲ್ಲದೆ, ಕರ್ನಾಟಕ ರಾಜ್ಯ ಶಾಂತಿಗೆ ಹೆಸರುವಾಸಿಯಾಗಿದೆ. ಇದು ಬಿಹಾರ ಅಲ್ಲ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕೆಂದು ನ್ಯಾ.ಬಿ.ವೀರಪ್ಪ ಅವರು ಸಲಹೆ ನೀಡಿದರು. 

ಖಾಕಿ ಸಮವಸ್ತ್ರ ಧರಿಸಿರುವ ನಿಮಗೆ ಯಾರಿಗೂ ಕಿರುಕುಳ ನೀಡುವ ಅಧಿಕಾರವಿಲ್ಲ. ಖಡಕ್ ಅಧಿಕಾರಿ, ಕಳಂಕರಹಿತ ಅಧಿಕಾರಿ, ನಿಯತ್ತಿನ ಅಧಿಕಾರಿ ಎಂದು ನಿಮ್ಮನ್ನು ನೋಡಿ ಹೆದರಬೇಕೇ ವಿನಹ ನೀವು ನೀಡುವಂತಹ ನೋಟಿಸ್‌ನಿಂದಲ್ಲ. ನೀವು ಹಾಕಿರೋ ಪೊಲೀಸ್ ಕ್ಯಾಪ್‌ನ ಮೇಲಿರುವ ಲಾಂಛನದ ಅರ್ಥ ನಿಮಗೆ ಗೋತ್ತೇನ್ರಿ ಎಂದು ನ್ಯಾಯಪೀಠವು ಪ್ರಶ್ನಿಸಿತು. ಇನ್ನು ಮುಂದೆ ಈ ರೀತಿ ಘಟನೆ ಮರುಕಳಿಸುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು. ಅಧಿಕಾರಿ ಎಂ.ಎಂ.ಭರತ್ ಹಾಜರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News