ಬಿಜೆಪಿಯಲ್ಲಿದ್ದರೂ ಸಿದ್ದರಾಮಯ್ಯರೇ ನಮ್ಮ ನಾಯಕ: ರಮೇಶ್ ಜಾರಕಿಹೊಳಿ

Update: 2019-12-13 12:15 GMT

ಬೆಂಗಳೂರು, ಡಿ. 13: ಹೃದ್ರೋಗ ಸಮಸ್ಯೆ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೂತನ ಶಾಸಕರಾದ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಶುಕ್ರವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯನವರ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ, ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಈ ವೇಳೆ ಕೆಲಕಾಲ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆಂದು ಗೊತ್ತಾಗಿದೆ.

ಬಾ ಅಂದಾಗ ಬರಲಿಲ್ಲ: ‘ಏನಯ್ಯ ರಮೇಶ್ ಬಾ ಅಂದಾಗ ಬರಲಿಲ್ಲ, ಈಗ ಬಂದಿದ್ದಿಯಲ್ಲ...’ ಎಂದು ಸಿದ್ದರಾಮಯ್ಯ, ಶಾಸಕ ರಮೇಶ್ ಜಾರಕಿಹೊಳಿ ಅವರ ಕಾಲೆಳೆದಿದ್ದಾರೆಂದು ಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್, ‘ಏನೇ ಇದ್ದರೂ ನೀವು ನಮ್ಮ ನಾಯಕರು. ನಿಮ್ಮ ಆರೋಗ್ಯ ಮುಖ್ಯ. ಹೀಗಾಗಿ ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇನೆ’ ಎಂದರು. ‘ಏನು ಮಂತ್ರಿ ಆಗ್ತೀಯ’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯನವರಿಗೆ ‘ನಿಮ್ಮ ಆಶೀರ್ವಾದ ಇರಲಿ ಸಾರ್’ ಎಂದರು. ‘ಈಗ ನನ್ನ ಆಶೀರ್ವಾದ ಏಕೆ ಬೇಕು. ಯಡಿಯೂರಪ್ಪ ಆಶೀರ್ವಾದ ಇರಬೇಕು ನಿನಗೆ’ ಎಂದು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ನಮ್ಮ ನಾಯಕರು: ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರು ಈಗ ಆರೋಗ್ಯವಾಗಿದ್ದು, ನಾಳೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಲಿದ್ದಾರೆ. ನಾನು ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಅವರೇ ನಮ್ಮ ನಾಯಕರು. ಪಕ್ಷ ಬದಲಾದರೂ ಅವರೇ ನಮ್ಮ ಗುರುಗಳು ಎಂದು ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.

ಆಸ್ಪತ್ರೆಯಲ್ಲಿ ನಾನು ಮತ್ತು ಸಿದ್ದರಾಮಯ್ಯನವರು ಏನೇನು ಮಾತನಾಡಿದ್ದೀವಿ ಎಂದು ಈಗ ಹೇಳಲಿಕ್ಕೆ ಆಗುವುದಿಲ್ಲ. ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ರಮೇಶ್ ಜಾರಕಿಹೊಳಿ ಇದೆ ವೇಳೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News