ಮಾನವ ಹಕ್ಕು ಆಯೋಗಗಳನ್ನು ಕಾಡುತ್ತಿರುವ ಸಿಬ್ಬಂದಿ ಕೊರತೆ : 10 ರಾಜ್ಯಗಳಲ್ಲಿ ಅಧ್ಯಕ್ಷರೇ ಇಲ್ಲ!

Update: 2019-12-13 14:14 GMT

ಹೊಸದಿಲ್ಲಿ,ಡಿ.13: ಹೊಸದಾಗಿ ಯಾವುದೇ ನೇಮಕಾತಿಗಳು ನಡೆಯುತ್ತಿಲ್ಲವಾದ್ದರಿಂದ ದೇಶಾದ್ಯಂತ ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ)ಗಳು ತೀವ್ರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ. ಹತ್ತು ರಾಜ್ಯಗಳಲ್ಲಿ ಆಯೋಗದ ಅಧ್ಯಕ್ಷರ ಹುದ್ದೆಗಳೇ ಖಾಲಿಬಿದ್ದಿವೆ. ಮೂರು ರಾಜ್ಯಗಳಲ್ಲಿ ಮಾನವ ಹಕ್ಕು ಆಯೋಗಗಳೇ ಇಲ್ಲ ಮತ್ತು ಎರಡು ರಾಜ್ಯಗಳಲ್ಲಿ ಇರುವ ಆಯೋಗಗಳೂ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ.

ಕೇವಲ 13 ರಾಜ್ಯಗಳಲ್ಲಿ ಮಾತ್ರ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎನ್‌ ಜಿಒ ಟ್ರಾನ್ಸ್‌ ಪರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ (ಟಿಐಐ) ಬಿಡುಗಡೆಗೊಳಿಸಿರುವ ವರದಿಯು ಈ ಆಘಾತಕಾರಿ ಅಂಶಗಳನ್ನು ಬಹಿರಂಗಗೊಳಿಸಿದೆ.

ವರದಿಯಲ್ಲಿ ತಿಳಿಸಿರುವಂತೆ ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಡ, ಗೋವಾ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಮಣಿಪುರ ಮತ್ತು ಮೇಘಾಲಯಗಳಲ್ಲಿಯ ಎಸ್‌ಎಚ್‌ಆರ್‌ಸಿಗಳಿಗೆ ಅಧ್ಯಕ್ಷರಿಲ್ಲ ಮತ್ತು ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಲ್ಲಿಯ ಎಸ್‌ಎಚ್‌ಆರ್‌ಸಿಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. 23 ರಾಜ್ಯ ಆಯೋಗಗಳಲ್ಲಿ ಸದಸ್ಯರಿಗಾಗಿ (ನ್ಯಾಯಾಂಗ ಮತ್ತು ನ್ಯಾಯಾಂಗೇತರ) ಮಂಜೂರಾಗಿದ್ದ 48 ಹುದ್ದೆಗಳ ಪೈಕಿ 23 ಖಾಲಿಯೇ ಇವೆ. ಹಾಲಿ ಇರುವಂತೆ ಕೇವಲ 37 ನೇಮಕಾತಿಗಳನ್ನು ದೃಢಪಡಿಸಲಾಗಿದೆ.

 ತನ್ಮಧ್ಯೆ ಆಯೋಗಗಳಲ್ಲಿ ಆಡಳಿತಾತ್ಮಕ ಕಾರ್ಯಗಳಿಗಾಗಿ ಮಂಜೂರಾಗಿದ್ದ ಒಟ್ಟು ಹುದ್ದೆಗಳ ಪೈಕಿ 286ಕ್ಕೆ ನೇಮಕಾತಿಗಳನ್ನು ಮಾಡಲಾಗಿಲ್ಲ. ಈ ಸಂಬಂಧ ಮಾಹಿತಿಗಳನ್ನೊದಗಿಸಲು ಹಲವಾರು ರಾಜ್ಯಗಳು ನಿರಾಕರಿಸಿವೆ. ಆಂಧ್ರಪ್ರದೇಶ ಮತ್ತು ಗೋವಾಗಳಲ್ಲಿಯ ಎಸ್‌ಎಚ್‌ಆರ್‌ಸಿಗಳು ನ್ಯಾಯಾಂಗ ಮತ್ತು ನ್ಯಾಯಾಂಗೇತರ ಸದಸ್ಯರ ಎರಡು ಹುದ್ದೆಗಳನ್ನು ಹೊಂದಿದ್ದು,ಇವೆರಡೂ ಖಾಲಿಯಿವೆ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಈ ಆಯೋಗಗಳೂ ಸಂಪೂರ್ಣವಾಗಿ ನಿಷ್ಕ್ರಿಯವಾಗಿರುವಂತಿದೆ.

 ಛತ್ತೀಸ್‌ಗಡದಲ್ಲಿಯೂ ಇದೇ ಸ್ಥಿತಿಯಿದೆ. ಅಲ್ಲಿ ಅಧ್ಯಕ್ಷ ಮತ್ತು ಓರ್ವ ಸದಸ್ಯರ ಹುದ್ದೆ ಖಾಲಿಯಿದ್ದು,ಕೇವಲ ಒಬ್ಬರೇ ಸದಸ್ಯರು ನೇಮಕಗೊಂಡಿದ್ದಾರೆ. ಗುಜರಾತ್, ಉತ್ತರಾಖಂಡ, ಸಿಕ್ಕಿಂ, ರಾಜಸ್ಥಾನ,ಮಹಾರಾಷ್ಟ್ರ,ಮಣಿಪುರ ಮತ್ತು ಮೇಘಾಲಯಗಳಲ್ಲಿ ತಲಾ ಓರ್ವ ಸದಸ್ಯರ ಹುದ್ದೆ ಖಾಲಿಯಿದ್ದರೆ,ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಎರಡು ಹುದ್ದೆಗಳು ಖಾಲಿಯಿವೆ.

ಅರುಣಾಚಲ ಪ್ರದೇಶ,ಮಿರೆರಾಂ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಮಾನವ ಹಕ್ಕು ಆಯೋಗಗಳಿಲ್ಲ.

ಟಿಐಐ ದೇಶಾದ್ಯಂತ ಎಸ್‌ಎಚ್‌ಆರ್‌ಸಿಗಳಿಂದ ಆರ್‌ಟಿಐ ಅರ್ಜಿಗಳ ಮೂಲಕ ಈ ಮಾಹಿತಿಗಳನ್ನು ಪಡೆದುಕೊಂಡಿದೆ. ಎಸ್‌ಎಚ್‌ಆರ್‌ಸಿಗಳಲ್ಲಿ ಆಡಳಿತಾತ್ಮಕ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ, ಛತ್ತೀಸ್‌ಗಡ, ಮಧ್ಯಪ್ರದೇಶ,ತ್ರಿಪುರಾ ಮತ್ತು ಉತ್ತರಾಖಂಡ ರಾಜ್ಯಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ.

1993ರ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕು ಆಯೋಗಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದಲ್ಲಿಯೂ ಒಂದು ಸದಸ್ಯ ಸ್ಥಾನ ಖಾಲಿಯಿದೆ,ಆದರೆ ತನ್ನ ಆಡಳಿತಾತ್ಮಕ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಅದು ಬಹಿರಂಗಗೊಳಿಸಿಲ್ಲ.

ಪ್ರಜೆಗಳ ಘನತೆ ಮತ್ತು ಆತ್ಮಗೌರವದ ರಕ್ಷಣೆಗಾಗಿ ಹಾಗೂ ದೇಶವು ಪ್ರಗತಿಪರ ಬದಲಾವಣೆಗಳೊಂದಿಗೆ ಮುಂದೆ ಸಾಗುವಂತಾಗಲು ಮಾನವ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದು ದೇಶದ ಪ್ರಮುಖ ಕಾನೂನಾಗಿದೆ. ಆದರೆ ದೇಶಾದ್ಯಂತ ಆಯೋಗಗಳಲ್ಲಿ ಹುದ್ದೆಗಳು ಖಾಲಿಯಿದ್ದರೆ ಈ ಉದ್ದೇಶ ಸಾಧನೆಯಾಗುವುದು ಹೇಗೆ? ಜನರ ಮಾನವ ಹಕ್ಕುಗಳನ್ನು ರಕ್ಷಿಸುವುದು ಹೇಗೆ ಎಂದು ಟಿಐಐನ ಕಾರ್ಯಕಾರಿ ನಿರ್ದೇಶಕ ರಾಮನಾಥ ಝಾ ಪ್ರಶ್ನಿಸಿದರು.

 ಟಿಐಐ ವರದಿಯಂತೆ ಈವರೆಗೆ 23 ಎಸ್‌ಎಚ್‌ಆರ್‌ಸಿಗಳಲ್ಲಿ ಸುಮಾರು 19 ಲಕ್ಷ ಮತ್ತು ಎನ್‌ಎಚ್‌ಆರ್‌ಸಿಯಲ್ಲಿ 16,62,519 ದೂರುಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News