ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆ ಪ್ರಧಾನ ಸಂಪಾದಕ ಡಾ.ಶಿವಾನಂದರಿಗೆ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ

Update: 2019-12-13 16:03 GMT
ಡಾ. ಯು.ಪಿ.ಶಿವಾನಂದ

ಬೆಂಗಳೂರು, ಡಿ.13: ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿರುವವರಿಗೆ ನೀಡಲಾಗುವ ಪ್ರತಿಷ್ಠಿತ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಒಂದು ಕನ್ನಡ ಪತ್ರಿಕೆಯನ್ನು ಹುಟ್ಟು ಹಾಕಿ ಬೆಳೆಸಿದವರಿಗೆ ನೀಡಲಾಗುವ ವಿಶೇಷ ಗೌರವದ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಸರಕಾರ ಪ್ರಕಟಿಸಿದೆ.

2017 ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯು ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆಯ ನಿವೃತ್ತ ಸಂಪಾದಕ ಧೃವರಾಜ್ ವೆಂಕಟರಾವ್ ಮುತಾಲಿಕ್ ದೇಸಾಯಿಗೆ ಹಾಗೂ 2018 ನೇ ವರ್ಷದ ಪ್ರಶಸ್ತಿಯು ಮೈಸೂರಿನ ಕನ್ನಡಿಗರ ಪ್ರಜಾ ನುಡಿ ಪತ್ರಿಕೆಯ ಸಂಪಾದಕ ಡಿ.ಮಹಾದೇವಪ್ಪಗೆ ಲಭಿಸಿದೆ.

2017 ನೆ ಸಾಲಿನ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ತುಮಕೂರು ಪ್ರಾದೇಶಿಕ ಪತ್ರಿಕೆಯ ಸಂಪಾದಕ ಎಸ್ ನಾಗಣ್ಣ ಹಾಗೂ 2018 ನೇ ವರ್ಷದ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ. ಯು.ಪಿ.ಶಿವಾನಂದ ಭಾಜನರಾಗಿದ್ದಾರೆ.

2016 ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ಪ್ರಜಾವಾಣಿ ಪತ್ರಿಕೆಯ ನಿವೃತ್ತ ಸಹ ಸಂಪದಾಕ ನಾಗೇಶ್ ಹೆಗಡೆ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ ಭಾಜನರಾಗಿದ್ದಾರೆ.

ಎಲ್ಲ ಪ್ರಶಸ್ತಿಗಳೂ ತಲಾ ಎರಡು ಲಕ್ಷ ರೂ.ನಗದು, ಸ್ಮರಣಿಕೆಗಳನ್ನು ಒಳಗೊಂಡಿದೆ. ಜನವರಿ ಮೊದಲನೇ ವಾರದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News