ಪೌರತ್ವ ಮಸೂದೆ ವಿರೋಧಿಸಿ ಮಡಿಕೇರಿಯಲ್ಲಿ ಮುಸ್ಲಿಂ ಜಮಾಅತ್‍ಗಳ ಒಕ್ಕೂಟದಿಂದ ಪ್ರತಿಭಟನೆ

Update: 2019-12-19 06:15 GMT

ಮಡಿಕೇರಿ, ಡಿ.13: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಮುಸ್ಲಿಂ ಜಮಾಅತ್‍ಗಳ ಒಕ್ಕೂಟದಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮಧ್ಯಾಹ್ನ ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ಜಮಾಅತ್ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ನಗರಸಭಾ ಮಾಜಿ ಸದಸ್ಯ ಮನ್ಸೂರ್ ಮಾತನಾಡಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕೃತಗೊಂಡ ರಾಷ್ಟ್ರೀಯ ಪೌರತ್ವ (ತಿದ್ದುಪಡಿ) ಮಸೂದೆ ನಮ್ಮ ದೇಶದ ನೈತಿಕ, ಸಾಂವಿಧಾನಿಕ ಸ್ಫೂರ್ತಿ ಮತ್ತು ಜಾತ್ಯತೀತ ಪರಂಪರೆಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ದೇಶದ ಪೌರತ್ವ ನೀಡುವಲ್ಲಿ ಧಾರ್ಮಿಕ ನೆಲೆಯ ತಾರತಮ್ಯ ತೋರುವುದು ಸಂವಿಧಾನದ ಪರಿಚ್ಛೇದ 14 ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಉಲ್ಲಂಘನೆಯಾಗಿದೆ. ಕೋಮು ದ್ರ್ರುವೀಕರಣ ಮತ್ತು ಮುಸ್ಲಿಮರನ್ನು ಬಲಿಪಶುವಾಗಿಸುವ ರಾಜಕೀಯವೇ ಇದರ ಹಿಂದಿರುವ ಉದ್ದೇಶವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ರಾಷ್ಟ್ರ ಎದುರಿಸುತ್ತಿರುವ ಗಂಭೀರ ಆರ್ಥಿಕ ಪರಿಸ್ಥಿತಿ ಮತ್ತು ಮೂಲಭೂತ ಗಂಭೀರ ಸಮಸ್ಯೆಗಳಿಂದ ಜನ ಸಾಮಾನ್ಯರ ಚಿಂತನೆಯನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವಾಗಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆಯೆಂದು ಹೇಳಿದರು. ಪ್ರತಿಯೊಬ್ಬರು ಈ ಮಸೂದೆಯನ್ನು ಬಲವಾಗಿ ವಿರೋಧಿಸುವುದರ ಮೂಲಕ ಕೋಮು ಸೌಹಾರ್ದದ ವಾತಾವರಣ, ವಿಶ್ವಾಸ, ನ್ಯಾಯ ಮತ್ತು ಕಾನೂನಿನ ಆಡಳಿತವನ್ನು ಪ್ರೋತ್ಸಾಹಿಸಲು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಹಕರಿಸಬೇಕೆಂದು ಮನವಿ ಮಾಡಿದರು.

ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮಿನ್ ಮೊಹ್ಸಿನ್ ಮಾತನಾಡಿ, ಒಂದು ದೇಶ, ಒಂದು ಕಾನೂನು ಎನ್ನುವ ಕೇಂದ್ರ ಸರ್ಕಾರ, ದೇಶದಲ್ಲಿ ಎರಡು ಕಾನೂನು ಮಾಡಹೊರಟಿದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿ ದೇಶದ ನೈತಿಕ, ಸಾಂವಿಧಾನಿಕ ಹಾಗೂ ಜಾತ್ಯತೀತ ಪರಂಪರೆಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಪೌರತ್ವ ಮಸೂದೆ ಎನ್ನುವುದು ಧಾರ್ಮಿಕ ನೆಲೆಯ ತಾರತಮ್ಯವಾಗಿದ್ದು, ಇದು ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿದೆ. ದಶಕಗಳಿಂದ ಭಾರತದಲ್ಲಿ  ನೆಲೆಸಿದ್ದರೂ ಒಂದು ಧರ್ಮಕ್ಕೆ ಸೇರಿದವರು ಭಾರತೀಯ ಪೌರತ್ವ ಪಡೆಯುವಲ್ಲಿ ವಂಚಿತರಾಗುತ್ತಾರೆ. ಇಂತಹ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಡಿಕೇರಿ ನಗರದ ಒಂಬತ್ತು ಮಸೀದಿಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಸ್ಲಿಂ ಜಮಾಅತ್ ಒಕ್ಕೂಟದ ಅಧ್ಯಕ್ಷ ಜಿ.ಹೆಚ್.ಮೊಹಮ್ಮದ್ ಹನೀಫ್, ಎಂಎಂ ಜಮಾಅತ್ ಕಾರ್ಯದರ್ಶಿ ಎಂ.ಎಂ.ಹಾರೂನ್, ಎಸ್‍ಡಿಪಿಐ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಹಾಗೂ ಪ್ರಮುಖರಾದ ಮುನೀರ್ ಅಹಮ್ಮದ್, ಸಮಾಜ ಸೇವಕ ಮೈಕಲ್ ಸೇರಿದಂತೆ ಹಲ ಪ್ರಮುಖರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News