ಬೆಂಗಳೂರು: ನ್ಯೂಜಿಲ್ಯಾಂಡ್ ತಂಡದಿಂದ ಆಯೋಜಿಸಿದ್ದ ಐದು ದಿನಗಳ ಕಾರ್ಯಾಗಾರ ಮುಕ್ತಾಯ

Update: 2019-12-13 16:48 GMT

ಬೆಂಗಳೂರು, ಡಿ.13: ಭಾರತದ ಈಸ್ ಆಫ್ ಡೂಯಿಂಗ್ ವರ್ಲ್ಡ್‌ ರ‌್ಯಾಂಕಿಂಗ್ ಹೆಚ್ಚಿಸಿಕೊಳ್ಳುವ ಕುರಿತು ನ್ಯೂಜಿಲ್ಯಾಂಡ್ ದೇಶದ ಹೈ ಕಮಿಷನ್ ತಂಡ ಖನಿಜ ಭವನದ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಐದು ದಿನದ ಕಾರ್ಯಾಗಾರ ಇಂದು ಮುಕ್ತಾಯಗೊಂಡಿತು.

ಈಸ್ ಆಫ್ ಡೂಯಿಂಗ್ ಬಿಸಿನೆಸ್ ವರ್ಲ್ಡ್‌ ರ‌್ಯಾಂಕಿಂಗ್‌ಗೆ ಈ ಬಾರಿ ಬೆಂಗಳೂರು ಆಯ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಈಸ್ ಆಫ್ ಡೂಯಿಂಗ್ ಬಿಸಿನೆಸ್‍ನನ್ನು ಸುಲಲಿತಗೊಳಿಸುವ ಉದ್ದೇಶದಿಂದ ಈಸ್ ಆಪ್ ಡೂಯಿಂಗ್ ವರ್ಲ್ಡ್‌ ರ‌್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ದೇಶದ ಹೈಕಮಿಷನ್ ತಂಡವನ್ನು ರಾಜ್ಯಕ್ಕೆ ಆಹ್ವಾನಿಸಲಾಗಿತ್ತು.

ಈ ತಂಡದ ಪ್ರತಿನಿಧಿಗಳು ಐದು ದಿನಗಳ ಕಾಲ ಕಂದಾಯ, ಬಿಬಿಎಂಪಿ, ಬಿಡಿಎ, ಕೈಗಾರಿಕೆ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಹೊಸ ಉದ್ಯಮ ತೆರೆಯಲು ಪ್ರಸ್ತುತ ಇರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಜೊತೆಗೆ, ಈ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಮಾರ್ಗದ ಬಗ್ಗೆಯೂ ಪರಿಹಾರ ತೆರೆದಿಟ್ಟರು.

ಯಾವುದೇ ನೂತನ ಬಿಸಿನೆಸ್ ಪ್ರಾರಂಭದ ಸಂದರ್ಭದಲ್ಲಿ ಸಿಂಗಲ್ ವಿಂಡೋ ವ್ಯವಸ್ಥೆ ಇರದ ಕಾರಣ ಏನೆಲ್ಲಾ ಸಮಸ್ಯೆ ಎದುರಿಸಲಾಗುತ್ತಿದೆ ಹಾಗೂ ಶೀಘ್ರ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಯ ಬಗ್ಗೆಯೂ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.

ಕಾರ್ಯಾಗಾರದ ಕೊನೆಯ ದಿನದಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರು ನ್ಯೂಜಿಲ್ಯಾಂಡ್ ಹೈಕಮಿಷನ್ ತಂಡವನ್ನು ಅಭಿನಂದಿಸಿದರು. ನೂತನ ಕೈಗಾರಿಕೆ ತೆರೆಯಲು ಉದ್ಯಮಿಗಳು ಇಲಾಖೆಯಿಂದ ಇಲಾಖೆಗೆ ಅಲೆಯುವ ಪದ್ಧತಿ ತೆಗೆದು ಎಲ್ಲಾ ವ್ಯವಸ್ಥೆಯನ್ನು ಆನ್‍ಲೈನ್ ವ್ಯಾಪ್ತಿಗೆ ತರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.

ಇದರಿಂದ ಶೀಘ್ರವಾಗಿ ಉದ್ಯಮ ತೆರೆಯುವ ಜೊತೆಗೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯೂ ಹೆಚ್ಚಾಗಲಿದೆ ಎಂದು ಅಭಿಪ್ರಯಾಪಟ್ಟರು. ಈ ಐದು ದಿನದ ಕಾರ್ಯಾಗಾರದಲ್ಲಿ ಕಲಿತ ಅಷ್ಟು ವಿಚಾರಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡು ಪಾರದರ್ಶಕ ಸೇವೆ ನೀಡುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಈಸ್ ಆಫ್ ಡೂಯಿಂಗ್ ಬಿಸಿನೆಸ್‍ನಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದೇ ಈ ಕಾರ್ಯಾಗಾರದ ಮೂಲ ಉದ್ದೇಶ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News