ನಂಜನಗೂಡು: ಬರಿಗೈಯಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಿದ ಪೌರಕಾರ್ಮಿಕರು; ಆರೋಪ

Update: 2019-12-13 17:19 GMT

ಮೈಸೂರು,ಡಿ.13: ನಂಜನಗೂಡು ನಗರದಲ್ಲಿ ಒಳಚರಂಡಿಯ ಮ್ಯಾನ್‍ಹೋಲ್ ಸ್ವಚ್ಛಗೊಳಿಸಲು ಪೌರಕಾರ್ಮಿಕರಿಗೆ ನಗರಭೆ ಅಧಿಕಾರಿಗಳು ಯಾವುದೇ ಮೂಲ ಸೌಕರ್ಯಗಳನ್ನು ನೀಡದೆ ಬರಿಗೈಯಲ್ಲಿ ಕೆಲಸ ಮಾಡಿಸಿರುವ ಅಮಾನವೀಯ ಘಟನೆ ನಡೆದಿದೆ ಎನ್ನಲಾಗಿದೆ.

ನಂಜನಗೂಡು ನಗರದ ಹೃದಯ ಭಾಗದಲ್ಲಿರುವ ಹುಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿ ಪೌರಕಾರ್ಮಿಕರು ಕೈಗಳಿಗೆ ಗ್ಲೌಸ್, ಕಾಲಿಗೆ ಬೂಟು ಮುಖಕ್ಕೆ ಮಾಸ್ಕ್ ಸೇರಿದಂತೆ ರಕ್ಷಣಾತ್ಮಕ ವಸ್ತುಗಳನ್ನು ಹಾಕಿಕೊಳ್ಳದೆ ಬರಿಗೈಯಲ್ಲಿ ಸುಮಾರು 5 ಅಡಿ ಆಳದ ಒಳಚರಂಡಿಯ ಮ್ಯಾನ್ ಹೋಲ್ ಒಳಗೆ ಇಳಿದು ಅಲ್ಲಿ ತುಂಬಿಕೊಂಡಿರುವ ಕೊಳಕನ್ನು ಸ್ವಚ್ಛ ಮಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪೌರಕಾರ್ಮಿಕರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಸೌಲಭ್ಯಗಳನ್ನು ಕೊಟ್ಟರೂ, ನಂಜನಗೂಡಿನ ನಗರಸಭೆ ಅಧಿಕಾರಿಗಳು ಮಾತ್ರ ಅದನ್ನು ನೀಡದೆ ಮೃಗಗಳಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಯಾವೊಬ್ಬ ಪೌರಕಾರ್ಮಿಕರಿಗೂ ರಕ್ಷಣಾ ಸಲಕರಣೆಗಳನ್ನು ನೀಡದೆ ಹಾಗೆ ದುಡಿಸುತ್ತಿದ್ದಾರೆ. ಒಂದು ವೇಳೆ ಕೊಟ್ಟಿದ್ದರೂ ಅದನ್ನು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರಾ, ಇಲ್ಲವೊ ಎಂಬ ಕೆಲಸವನ್ನು ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಳೆದ ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರೂ ತಿರುಗಿ ನೋಡದ ಜನಪ್ರತಿನಿಧಿಗಳು, ನಗರಸಭೆ ಅಧಿಕಾರಿಗಳು ಪೌರಕಾರ್ಮಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯಗಳಲ್ಲಿ ವ್ಯಕ್ತವಾಗುತ್ತಿದೆ.

ನಗರಸಭೆ ಪೌರಕಾರ್ಮಿಕರು ಮ್ಯಾನ್ ಹೋಲ್ ಸ್ವಚ್ಛಗೊಳಿಸಿಲ್ಲ, ಮಳೆ ಬಂದಾಗ ರಸ್ತೆ ಪಕ್ಕದ ಡ್ರೈನೇಜ್‍ನಲ್ಲಿ ಮಣ್ಣು ತುಂಬಿಕೊಂಡಿತ್ತು, ಅದನ್ನು ಗುತ್ತಿಗೆ ನೀಡಿದ್ದವರು ಸ್ವಚ್ಛಗೊಳಿಸಿರುವುದು, ನಗರಸಭೆಗೂ ಇದಕ್ಕೂ ಸಂಬಂಧವಿಲ್ಲ.
-ಕರಿಬಸವಯ್ಯ, ನಗರಸಭೆ ಪೌರಾಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News