ಶಿವಮೊಗ್ಗ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ

Update: 2019-12-19 06:14 GMT

ಶಿವಮೊಗ್ಗ, ಡಿ.13: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಂ ಮುತಾಹಿದ್ ಮಹಾಝ್ ಸಂಘಟನೆಯು ಕೇಂದ್ರ ಸರ್ಕಾರದ ವಿರುದ್ಧ ನಗರದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಅರ್ಪಿಸಿತು. 

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಲಾಗಿರುವ ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದಾಗಿದೆ. ದೇಶದ ಜಾತ್ಯತೀತ, ನೈತಿಕ ತತ್ವಾದರ್ಶ, ಪರಂಪರೆಗಳಿಗೆ ಮಸೂದೆಯು ಸಂಪೂರ್ಣ ತದ್ವಿರುದ್ದವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪೌರತ್ವ ನೀಡಿಕೆಯ ವಿಷಯದಲ್ಲಿ ಧಾರ್ಮಿಕ ನೆಲೆಗಟ್ಟು ಬಳಕೆ ಮಾಡಿರುವುದು ಸಂವಿಧಾನದ ಪರಿಚ್ಛೇದ 14 ಹಾಗೂ ಅಂತಾರಾಷ್ಟ್ರೀಯ ಹಕ್ಕು-ಒಪ್ಪಂದಗಳ ಉಲ್ಲಂಘನೆಯಾಗಿದೆ. ಕೋಮುಧ್ರುವೀಕರಣ ಹಾಗೂ ಮುಸ್ಲಿಂ ಸಮುದಾಯವನ್ನು ಬಲಿಪಶುವನ್ನಾಗಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ಧಾರೆ. 

ದೇಶದ ಆರ್ಥಿಕ ಸ್ಥಿತಿಯು ಗಂಭೀರ ಸ್ವರೂಪಕ್ಕೆ ತಲುಪಿದೆ. ಹತ್ತು ಹಲವು ಸಮಸ್ಯೆಗಳು ಮನೆ ಮಾಡಿವೆ. ದೇಶವಾಸಿಗಳು ನಾನಾ ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ, ಜನರ ಗಮನ ಬೇರೇಡೆ ಸೆಳೆಯಲು ಈ ಮಸೂದೆ ಮಂಡನೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಈ ಮಸೂದೆಯು ಸಂಪೂರ್ಣ ಜನ ವಿರೋಧಿ ಹಾಗೂ ರಾಜಕೀಯ ಪ್ರೇರಿತವಾಗಿದೆ. ಯಾವುದೇ ಕಾರಣಕ್ಕೂ ಈ ಮಸೂದೆಗೆ ರಾಷ್ಟ್ರಪತಿಗಳು ಅಂಗೀಕಾರ ಹಾಕಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಪರ್ವೀಜ್ ಅಫ್ತಾಬ್ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News