ಕನಕಪುರ ಪೇಟೆಕೆರೆ ಅಭಿವೃದ್ಧಿಗೆ 2.85 ಕೋಟಿ ಬಿಡುಗಡೆ: ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಸರಕಾರ

Update: 2019-12-13 17:46 GMT

ಬೆಂಗಳೂರು, ಡಿ.13: ರಾಮನಗರ ಜಿಲ್ಲೆ ಕನಕಪುರ ಪಟ್ಟಣದಲ್ಲಿರುವ ಪೇಟೆಕೆರೆ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕೆ 2.85 ಕೋಟಿ ರೂ.ಬಿಡುಗಡೆಯಾಗಿದ್ದು, 24 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್‌ಗೆ ರಾಜ್ಯ ಸರಕಾರ ಪ್ರಮಾಣ ಪತ್ರ ಸಲ್ಲಿಸಿದೆ. 

ಈ ಕುರಿತು ಸಾತನೂರು ಹೋಬಳಿಯ ರವಿಕುಮಾರ್ ಕೆಂಚನಹಳ್ಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸರಕಾರದ ಪರ ವಕೀಲರು, ಪೇಟೆಕೆರೆ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತಿದ್ದು, 24 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾಲಮಿತಿಯನ್ನು ಹಾಕಿಕೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಕೆರೆಯ ಒಟ್ಟು ವಿಸ್ತ್ರೀರ್ಣ 36 ಎಕರೆ 27 ಗುಂಟೆ, ಅದರಲ್ಲಿ 16 ಎಕರೆ 16 ಗುಂಟೆಯನ್ನು ಬಸ್ ನಿಲ್ದಾಣ, ಕೋರ್ಟ್ ಕಟ್ಟಡ, ಪೊಲೀಸ್ ಠಾಣೆ ಮತ್ತಿತರ ಸಾರ್ವಜನಿಕ ಬಳಕೆಗೆ ನೀಡಲಾಗಿದೆ. ಉಳಿದ ಕೆರೆಯ ಜಾಗವನ್ನೂ ಅಭಿವೃದ್ಧಿ ಮತ್ತು ಪುನಶ್ಚೇತನ ಮಾಡುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಆದರೆ, ಶುಕ್ರವಾರ ಕನಕಪುರದ ಸ್ಥಳೀಯ ತಹಶೀಲ್ದಾರ್ ಅವರು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಉಳಿದಿರುವ 20 ಎಕರೆ ಕೆರೆ ಜಾಗವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಪೀಠಕ್ಕೆ ತಿಳಿಸಿದರು. ಪ್ರಮಾಣ ಪತ್ರ ಮಾನ್ಯ ಮಾಡಿದ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News