ಮದ್ದೂರು: ಕೆಪಿಟಿಸಿಎಲ್ ಅಧಿಕಾರಿಗಳಿಗೆ ಘೇರಾವ್ ಹಾಕಿದ ರೈತರು

Update: 2019-12-13 18:12 GMT

ಮದ್ದೂರು, ಡಿ.13: ಪಟ್ಟಣ ಸಮೀಪದ ಗೊರವನಹಳ್ಳಿ ಬಳಿಯ ರೈತರ ಜಮೀನಿನಲ್ಲಿ ರೈತರಿಗೆ ಯಾವುದೇ ಮಾಹಿತಿ ನೀಡದೆ ಹಾಗೂ ಪರಿಹಾರವನ್ನು ನೀಡದೆ ವಿದ್ಯುತ್ ಹೈ ಟೆನ್ಷನ್ ವೈರ್ ಕಂಬಗಳನ್ನು ನಿರ್ಮಿಸಲು ಬಂದಿದ್ದಾರೆಂದು ಆರೋಪಿಸಿ ರೈತರು ಕೆಪಿಟಿಸಿಎಲ್ ಅಧಿಕಾರಿಗಳನ್ನು ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.

ಅಭಿವೃದ್ಧಿ ಕಾರ್ಯಗಳಿಗೆ ರೈತರ ಭೂ ಸ್ವಾಧೀನ ಪಡಿಸಿಕೊಳ್ಳಲಾದ ಭೂಮಿಗೆ ಯಾವುದೇ ಬಿಡಿಗಾಸಿನ ಪರಿಹಾರವನ್ನು ನೀಡಿಲ್ಲ. ಅದಲ್ಲದೆ ಮೊದಲಾಗಿ ಭೂ ಮಾಲಕರ ಅನುಮತಿ ಪಡೆದುಕೊಂಡಿಲ್ಲ. ಹೀಗಿದ್ದರೂ ಏಕಾಏಕಿ ಪೊಲೀಸರನ್ನು ಬಳಿಸಿಕೊಂಡು ದಬ್ಬಾಳಿಕೆಯಿಂದ ಹೈಟೆನ್ಷನ್ ವೇರ್ ಬಳಕೆ ಮಾಡಲು ಮುಂದಾಗಿ, ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದಾರೆಂದು ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಶಾಸಕರ, ಸಂಬಂಧಪಟ್ಟ ಅಧಿಕಾರಿಗಳ ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ಸೂಕ್ತ ಪರಿಹಾರವನ್ನು ತೀರ್ಮಾನಿಸಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ರೈತರು ಪಟ್ಟು ಹಿಡಿದರು.

ತಹಶೀಲ್ದಾರ್ ನಾಗೇಶ್ ಮಾತನಾಡಿ, ಜಮೀನಿಗೆ ಪರಿಹಾರ ತುಂಬಾ ಕಡಿಮೆ ನೀಡಲಾಗುತ್ತಿದೆ ಎಂದು ರೈತರು ತಿಳಿಸುತ್ತಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ತಾತ್ಕಾಲಿಕವಾಗಿ ಅಧಿಕಾರಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News