ಬಾಲಕಿಯ ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

Update: 2019-12-13 18:16 GMT

ಚಿಕ್ಕಮಗಳೂರು, ಡಿ.13: ಮೂಡಿಗೆರೆ ತಾಲೂಕಿನ 16 ವರ್ಷದ ಬಾಲಕಿಯ ಅತ್ಯಾಚಾರ ಪ್ರಕರಣ ಸಂಬಂಧ ತಾಲೂಕಿನ ಲೋಕವಳ್ಳಿ ಗ್ರಾಮದ ಕುಮಾರ್ ಎಂಬ ಆರೋಪಿಗೆ ನಗರದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2018 ಮಾ.13ರಂದು ಆರೋಪಿ ಕುಮಾರ್ ದೇವರಮನೆ ದೇವಸ್ಥಾನ ಹೋಗಲು ಬಲವಂತವಾಗಿ ಬಾಲಕಿಯನ್ನು ಬೈಕ್‍ನಲ್ಲಿ ಕರೆದು ಕೊಂಡು ಹೋಗಿ ಮದುವೆಯಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ನಂತರ ಮನೆಗೆ ಹೋಗಬೇಕೆಂಬ ಬಾಲಕಿಯ ಮಾತನ್ನು ನಿರಾಕರಿಸಿ ಶೃಂಗೇರಿ, ಹೊರನಾಡು, ಮಂಗಳೂರು ಮತ್ತು ಉಡುಪಿಗೆ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ 376(2), (ಐ) ಮತ್ತು (ಎನ್) ಹಾಗೂ ಕಲಂ 5 ಮತ್ತು 6 ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಮೂಡಿಗೆರೆ ಠಾಣೆಯ ಪೊಲೀಸರು ಆರೋಪಿಯ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಲ್.ಅಶೋಕ್ ಅವರು ಆರೋಪಿ ಕುಮಾರ್ ಗೆ ಭಾ.ದಂ.ಸಂ.ಕಲಂ 376(2)(ಐ)(ಎನ್) ಹಾಗೂ ಕಲಂ 5 ಮತ್ತು 6 ಪೋಕ್ಸೋ ಕಾಯ್ದೆಯಡಿ ಅಪರಾಧಕ್ಕೆ 10 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಬಿ.ಎಚ್.ಹರ್ಷ ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News