ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಜ.8ಕ್ಕೆ 'ಗ್ರಾಮೀಣ ಕರ್ನಾಟಕ ಬಂದ್‌'ಗೆ ಕರೆ

Update: 2019-12-13 18:25 GMT

ಬೆಂಗಳೂರು, ಡಿ.13: ಎಲ್ಲ ರೈತರು, ಕೃಷಿ ಕೂಲಿಕಾರರನ್ನು ಸಾಲದಿಂದ ಮುಕ್ತಿಗೊಳಿಸುವ ಋಣ ಮುಕ್ತ ಕಾಯ್ದೆ ಜಾರಿ, ಡಾ.ಸ್ವಾಮಿನಾಥನ್ ವರದಿ ಜಾರಿ, ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿ ಜ.8 ರಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ‘ಗ್ರಾಮೀಣ ಕರ್ನಾಟಕ ಬಂದ್’ಗೆ ಕರೆ ನೀಡಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿ.ಸಿ.ಬಯ್ಯಿರೆಡ್ಡಿ, ಆಳುವ ಸರಕಾರಗಳ ನಿರಂತರ ರೈತ ವಿರೋಧಿ ನೀತಿಗಳಿಂದ ಉಂಟಾಗಿರುವ ಕೃಷಿ ಬಿಕ್ಕಟ್ಟಿನ ಪರಿಣಾಮ ದೇಶದಲ್ಲಿ ಆತ್ಮಹತ್ಯೆಗಳ ಪ್ರಮಾಣ ಅಧಿಕವಾಗಿದೆ. ಹೀಗಾಗಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು ಎಂದರು.

ರಾಜ್ಯದಲ್ಲಿ ಉಂಟಾದ ಪ್ರವಾಹದಿಂದಾಗಿ ನೂರಾರು ಕುಟುಂಬಗಳು ಬೀದಿ ಪಾಲಾಗಿದ್ದು, ಸಾವಿರಾರು ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅಸಂಖ್ಯಾತ ರೈತರು, ಕೃಷಿ ಕೂಲಿಕಾರರು ಹಾಗೂ ಇತರೆ ಕಸುಬುದಾರರಿಗೆ ಕೂಡಲೇ ನ್ಯಾಯಯುತ ಪರಿಹಾರ ನೀಡಬೇಕು. ಕೇಂದ್ರದ ಭೂಸ್ವಾಧೀನ ಕಾಯ್ದೆಯ ಆಶಯಕ್ಕೆ ವಿರುದ್ಧವಾಗಿ ಹಿಂದಿನ ರಾಜ್ಯ ಸರಕಾರ ತಂದಿರುವ ತಿದ್ಧುಪಡಿಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ. ಅದಕ್ಕೂ ಮೊದಲು ಎಐಕೆಎಸ್‌ಸಿಸಿಯ ಅಖಿಲ ಭಾರತ ನಾಯಕತ್ವಕ್ಕೆ ರಾಷ್ಟ್ರಪತಿ ನೀಡಿದ್ದ ಭರವಸೆಯನ್ನು ನೆನಪಿಸುವ ಉದ್ದೇಶದಿಂದ ಡಿ.23 ರಿಂದ ಜ.3 ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರೈತರ ಸಮಾವೇಶ, ಮೆರವಣಿಗೆ ಮೂಲಕ ಹೋರಾಟ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಜೆ.ಎಂ.ವೀರಸಂಗಯ್ಯ, ಎಐಕೆಎಸ್‌ನ ಪಿ.ಪ್ರಸನ್ನ ಕುಮಾರ್, ಬಿಕೆಎಂಯುನ ಡಾ.ಕೆ.ಎಸ್.ಜನಾರ್ಧನ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News