ಸಚಿವ ಸಂಪುಟ ಸೇರ್ಪಡೆಗೆ ಬಿಜೆಪಿ ಶಾಸಕರ ನಡುವೆ ಪೈಪೋಟಿ

Update: 2019-12-14 16:39 GMT

ಬೆಂಗಳೂರು, ಡಿ. 14: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೆ ಸಚಿವ ಸಂಪುಟ ಸೇರ್ಪಡೆಗೆ ನೂತನ ಶಾಸಕರು, ಬಿಜೆಪಿ ಹಿರಿಯ ಶಾಸಕರ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ಮತ್ತೊಂದೆಡೆ ‘ಉಪಮುಖ್ಯಮಂತ್ರಿ’ ಹುದ್ದೆಗೆ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಜಟಾಪಟಿ ಆರಂಭವಾಗಿದೆ.

ಉಪಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ರಮೇಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಭರವಸೆ ನೀಡಿದ್ದು, ಅದರನ್ವಯ ರಮೇಶ್ ಡಿಸಿಎಂ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಡಿಸಿಎಂ ಸ್ಥಾನಕ್ಕಾಗಿ ನಾಯಕ(ಎಸ್ಟಿ) ಸಮುದಾಯದ ಇಬ್ಬರ ಮಧ್ಯೆ ಅಸಮಾಧಾನಕ್ಕೂ ಕಾರಣವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಇತ್ತೀಚೆಗೆ ನಡೆದ ಸಂಪುಟ ಸಭೆ ಮತ್ತು ಆರೋಗ್ಯ ಇಲಾಖೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಈ ಮಧ್ಯೆ ನಗರದಲ್ಲಿಂದು ಸ್ಪಷ್ಟನೆ ನೀಡಿರುವ ಸಚಿವ ಶ್ರೀರಾಮುಲು, ‘ನಾನು ಯಾವುದೇ ಅಸಮಾಧಾನಗೊಂಡಿಲ್ಲ. ಬದಲಿಗೆ ವೈಯಕ್ತಿಕ ಕಾರ್ಯಗಳ ಹಿನ್ನೆಲೆಯಲ್ಲಿ ಸಿಎಂ ಅನುಮತಿ ಪಡೆದು ಸಂಪುಟ ಸಭೆಗೆ ಗೈರುಹಾಜರಾಗಿದ್ದೇನೆ’ ಎಂದಿದ್ದಾರೆ.

ಸಮುದಾಯದ ಅಪೇಕ್ಷೆ: ‘ನಾನು ಉಪಮುಖ್ಯಮಂತ್ರಿ ಆಗಬೇಕೆಂಬುದು ಸಮುದಾಯದ ಅಪೇಕ್ಷೆ. ನಾನು ಯಾವುದೇ ಸ್ಥಾನಕ್ಕೆ ಪಟ್ಟು ಹಿಡಿದಿಲ್ಲ. ಅಲ್ಲದೆ, ಈ ಬಗ್ಗೆ ನಾನೂ ಎಲ್ಲಿಯೂ ಚರ್ಚೆಯನ್ನೂ ಮಾಡಿಲ್ಲ’ ಎಂದು ಶ್ರೀರಾಮುಲು ಇದೇ ವೇಳೆ ಸ್ಪಷ್ಟಪಡಿಸಿದರು.

‘ನಾನು ಮುಖ್ಯಮಂತ್ರಿ ಬಿಎಸ್‌ವೈ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಪಕ್ಷದ ತೀರ್ಮಾನಕ್ಕೆ ಬದ್ಧ. ಸದ್ಯದ ಪರಿಸ್ಥಿತಿ ನೋಡಿಕೊಂಡು ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ನಾನು ಇದೇ ಸ್ಥಾನ ಬೇಕು ಎನ್ನುವ ರಾಜಕಾರಣದಿಂದ ಬಂದಿಲ್ಲ ಎಂದು ಅವರು ಹೇಳಿದರು.

ಪಕ್ಷದ ಅಭ್ಯುದಯ ನನಗೆ ಮುಖ್ಯ. ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಯಾರಿಗೆ ಯಾವ ಹುದ್ದೆ ಅಂತ ಪಕ್ಷ ನಿರ್ಧರಿಸುತ್ತದೆ. ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಂಡ್ ಹಸಿರು ನಿಶಾನೆ ತೋರಿಸಬೇಕಾಗುತ್ತದೆ. ಜಾರ್ಖಂಡ್ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದು ಶ್ರೀರಾಮುಲು ತಿಳಿಸಿದರು.

ಕೊಟ್ಟರೆ ನಿಭಾಯಿಸುವೆ: ಮನುಷ್ಯನಿಗೆ ಆಸೆ ಸಹಜ. ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ ಬೇಡ ಎನ್ನಲಾರೆ, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಆದರೆ, ಪಕ್ಷ ಯಾವುದೇ ತೀರ್ಮಾನ ಕೈಗೊಂಡರೂ ಮುಜುಗರ ಆಗುವಂತಹ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ಶ್ರೀರಾಮುಲು ತಿಳಿಸಿದರು.

ಶ್ರೀರಾಮುಲುಗಿಂತ ನಾನು ಹಿರಿಯ: ಶ್ರೀರಾಮುಲು ಪಕ್ಷದ ಪ್ರಮುಖ ನಾಯಕ. ಆದರೆ, ಅವರಿಗಿಂತ ಮೊದಲಿನಿಂದ ಪಕ್ಷ ಕಟ್ಟಿದ ಹಿರಿಯ ನಾನು. ನನಗೂ ಮೊದಲೇ ಸಚಿವನಾಗಬೇಕೆಂಬ ಅಪೇಕ್ಷೆ ಇದ್ದರೂ ತ್ಯಾಗ ಮಾಡಿದ್ದೇನೆ. ಈ ಸಮಸ್ಯೆಯನ್ನು ಸಿಎಂ ಬಗೆಹರಿಸಲಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಸೋತ ಎಚ್.ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಸಚಿವ ಪಟ್ಟಕ್ಕಾಗಿ ನೂತನ ಶಾಸಕರ ಮೂಲಕ ಲಾಬಿ ನಡೆಸಿರುವುದು ಗುಟ್ಟಿನ ಸಂಗತಿಯೇನಲ್ಲ. ಈ ನಡುವೆ ಮೂಲ ಬಿಜೆಪಿ ಶಾಸಕರು ಜಿಲ್ಲೆ, ಜಾತಿ ಪ್ರಾತಿನಿಧ್ಯ ಆಧರಿಸಿ ಸಚಿವ ಸ್ಥಾನಕ್ಕೆ ಪಟ್ಟು ಹಿಡಿರುವುದು ಬಿಜೆಪಿ ವರಿಷ್ಠರಿಗೆ ತಲೆನೋವಾಗಿದೆ.

ಅನರ್ಹರು ಬ್ಲ್ಯಾಕ್‌ಮೇಲ್ ಗಿರಾಕಿಗಳು

ಚುನಾವಣೆಯಲ್ಲಿ ಗೆದ್ದ ಮೇಲೆ ಶಾಸಕರು ಬಿಜೆಪಿ ಪಕ್ಷದಲ್ಲೂ ಬ್ಲ್ಯಾಕ್‌ಮೇಲ್ ಮಾಡಲು ಶುರುಮಾಡಿದ್ದಾರೆ. ಅವರು ಎಲ್ಲಿದ್ದರೂ ಬ್ಲ್ಯಾಕ್‌ಮೇಲ್ ಗಿರಾಕಿಗಳೇ. ಸೋತವರಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡಬೇಕೆಂದು ಬ್ಲ್ಯಾಕ್‌ಮೇಲ್ ಮಾಡುವುದು ನ್ಯಾಯವಲ್ಲ. ಬಿಜೆಪಿ ಪಕ್ಷದಲ್ಲಿ 25 ರಿಂದ 30 ವರ್ಷಗಳ ಕಾಲ ದುಡಿದವರಿಗೆ ಅರ್ಹತೆ ಇದ್ದರೂ ಅನರ್ಹ ಶಾಸಕರ ಬ್ಲ್ಯಾಕ್‌ಮೇಲ್ರಾಜಕಾರಣದಿಂದಾಗಿ ಸ್ಥಾನದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಬಿಜೆಪಿ ಸರಕಾರ ಆಡಳಿತದಲ್ಲಿ ಹೆಚ್ಚು ದಿನ ಉಳಿಯವ ಲಕ್ಷಣಗಳು ಕಾಣುತ್ತಿಲ್ಲ.

-ಶಿವಶಂಕರರೆಡ್ಡಿ, ಮಾಜಿ ಸಚಿವ

ಹಾಲು-ಜೇನಿನಂತೆ ಇದ್ದೇವೆ

ಸಚಿವ ಸ್ಥಾನ ನೀಡಿಕೆ ವಿಚಾರದಲ್ಲಿ ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಯಾವುದೇ ತಿಕ್ಕಾಟವಿಲ್ಲ. ಇದೆಲ್ಲಾ ಊಹಾಪೋಹ ಹಾಗೂ ಮಾಧ್ಯಮಗಳ ಸೃಷ್ಟಿ. ಈಗ ಗೆದ್ದವರು, ಹಿಂದೆ ಇದ್ದವರು ಎಲ್ಲರೂ ಹಾಲು-ಜೇನಿನಂತೆ ಇದ್ದೇವೆ.

-ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News