'ಅತ್ಯಾಚಾರ, ನಿರುದ್ಯೋಗ, ಬೆಲೆ ಏರಿಕೆ' ಉಲ್ಲೇಖಿಸಿ ಕೇಂದ್ರ ಸರಕಾರವನ್ನು ಕುಟುಕಿದ ರಾಜ್ಯ ಕಾಂಗ್ರೆಸ್

Update: 2019-12-14 15:30 GMT

ಬೆಂಗಳೂರು, ಡಿ.14: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಅಗತ್ಯ ವಸ್ತುಗಳು ಹಾಗೂ ತೈಲೋತ್ಪನ್ನಗಳ ಬೆಲೆ ಏರಿಕೆ, ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿಸಿ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್‌ಗಳನ್ನು ಮಾಡಿದೆ. 

ದೇಶದ ಜನರನ್ನು ಹೆದರಿಸಲಾಗುತ್ತಿದೆ. ದೇಶದ ಹೆಣ್ಣುಮಕ್ಕಳು ಸುರಕ್ಷಿತರಾಗಿಲ್ಲ. ಇನ್ನು ಸಹಿಸಲು ಸಾಧ್ಯವಿಲ್ಲ. ‘ಭಾರತ ಉಳಿಸಿ ಅಭಿಯಾನ’ಕ್ಕೆ ಜೊತೆಯಾಗುತ್ತೇವೆ. ಭ್ರಷ್ಟಾಚಾರದಿಂದ ಭಾರತ ಉಳಿಸಿ. ನಾವು ಈ ದೇಶದ ಬಡ ಮತ್ತು ಮಧ್ಯಮ ವರ್ಗದ ಜನ. ಪೆಟ್ರೋಲ್ ಬೆಲೆ 80 ರೂ., ಈರುಳ್ಳಿ ಬೆಲೆ 120 ರೂ.ಇನ್ನು ಸಹಿಸಲು ಸಾಧ್ಯವಿಲ್ಲ. ‘ಭಾರತ ಉಳಿಸಿ ಅಭಿಯಾನ’ಕ್ಕೆ ಜೊತೆಯಾಗುತ್ತೇವೆ ಎಂದು ಅವರು ದೂರಿದರು.

ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ’ರೈತರ ಆತ್ಮಹತ್ಯೆ’ಯಿಂದ, ಭಾರತ ಉಳಿಸಿ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದರು, ಮರೆಯ ಬೇಡಿ. ಜಿಎಸ್‌ಟಿ, ನೋಟ್ ಬ್ಯಾನ್‌ನಂತಹ ಆಘಾತಗಳಿಂದ, ಭಾರತ ಉಳಿಸಿ. ದೇಶದ ಶ್ರೀಮಂತ ಉದ್ಯಮಪತಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಆಗುತ್ತಿದೆ. ಬಡವರ, ಮಧ್ಯಮವರ್ಗದವರ ಹಣವನ್ನು ಬ್ಯಾಂಕುಗಳು ನುಂಗಿ ಹಾಕುತ್ತಿವೆ. ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ನಿರಂತರ ‘ಬೆಲೆ ಏರಿಕೆ’ಯಿಂದ, ಭಾರತ ಉಳಿಸಿ. ದೇಶದ ಅರ್ಥ ವ್ಯವಸ್ಥೆಯನ್ನು ನಾಶಗೊಳಿಸಿದರು, ಮರೆಯಬೇಡಿ. ರಿಸರ್ವ್ ಬ್ಯಾಂಕ್ ಲೂಟಿ ಮಾಡಿದವರಿಂದ, ಭಾರತ ಉಳಿಸಿ. ನಾವು ದೇಶದ ಯುವ ಪೀಳಿಗೆ. ನಿರುದ್ಯೋಗದಿಂದ ಸಂಕಷ್ಟ ಅನುಭವಿಸುತ್ತಿದ್ದೇವೆ. ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಜನ ವಿರೋಧಿ ಸಂಚಾರ ನಿಯಮಗಳಿಂದ ಆಗುತ್ತಿರುವ ಹಗಲು ದರೋಡೆಯಿಂದ, ಭಾರತ ಉಳಿಸಿ. ‘ಭೇಟಿ ಬಚಾವೋ’ ಘೋಷಣೆ ಕೂಗಿ ಅಧಿಕಾರಕ್ಕೆ ಬಂದರು, ಈಗ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರಗಳನ್ನು, ಮರೆತರು. ತಮ್ಮದೇ ಪಕ್ಷದ ನಾಯಕರಿಂದ ಅತ್ಯಾಚಾರಗಳು ಆಗುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದರು. ಇಂತಹ ದೇಶ ವಿರೋಧಿ ಶಕ್ತಿಗಳಿಂದ ಭಾರತವನ್ನು ಒಟ್ಟಾಗಿ ರಕ್ಷಿಸೋಣ ‘ಭಾರತ ಉಳಿಸಿ ಅಭಿಯಾನ’ ಎಂದು ಕಾಂಗ್ರೆಸ್ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News