ಕ್ವಿಟ್ ಇಂಡಿಯಾ ಚಳವಳಿಯಂತೆ ಪೌರತ್ವ ನೋಂದಣಿಯನ್ನು ವಿರೋಧಿಸಬೇಕು: ಎಸ್.ಆರ್.ಹಿರೇಮಠ

Update: 2019-12-14 15:34 GMT

ಹುಬ್ಬಳ್ಳಿ, ಡಿ.14: ಕೇಂದ್ರ ಸರಕಾರ ದೇಶಾದ್ಯಂತ ಜಾರಿ ಮಾಡಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿಯಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಷ್ಟ್ರೀಯ ಪೌರತ್ವ ನೋಂದಣಿಯು ಮಹಾತ್ಮಾ ಗಾಂಧಿ, ಡಾ. ಬಿ.ಆರ್.ಅಂಬೇಡ್ಕರ್‌ರವರ ಆಶಯಕ್ಕೆ ವಿರುದ್ಧವಾಗಿದೆ. ಆದರೆ, ಇದನ್ನು ಬಿಜೆಪಿ ಹಾಗೂ ಸಂಘ ಪರಿವಾರ ತಿದ್ದುಪಡಿ ಮಾಡಿ ಕಾಯ್ದೆ ಜಾರಿಗೆ ತರುವ ಮೂಲಕ ಸಂವಿಧಾನಕ್ಕೆ ಕೊಡಲಿ ಪೆಟ್ಟು ಕೊಟ್ಟಿದೆ ಎಂದು ದೂರಿದರು.

ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಮಾನವೀಯ ಮೌಲ್ಯ, ದೇಶದ ಅಂತಃಸತ್ವವಾಗಿರುವ ಬಹುತ್ವದ ಆಶಯಗಳಿಗೆ ತಿಲಾಂಜಲಿ ಇಡಲು ಮುಂದಾಗಿದೆ. ಹೀಗಾಗಿ ರಾಷ್ಟ್ರದ ಎಲ್ಲ ಜನರು ಕ್ವಿಟ್ ಇಂಡಿಯಾ ಚಳವಳಿ ಹೋರಾಟದಂತೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧ ಮಾಡಬೇಕೆಂದು ಅವರು ಆಶಿಸಿದರು.

ಉಪ ಲೋಕಾಯುಕ್ತ ಹುದ್ದೆಗೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲರನ್ನು ನೇಮಕ ಮಾಡಿರುವುದು ನಿಯಮಗಳ ಉಲ್ಲಂಘನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಆಯ್ಕೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬೆನಗನಹಳ್ಳಿಯಲ್ಲಿನ 4 ಎಕರೆ 20 ಗುಂಟೆ ಭೂಮಿ ಡಿನೋಟಿಫಿಕೇಶನ್ ಪ್ರಕರಣ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಎದುರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಬಿ.ಎಸ್.ಯಡಿಯೂರಪ್ಪರವರ ವಿಚಾರಣೆ 2020 ಜ.7ರಂದು ನಡೆಯಲಿದ್ದು, ಇದನ್ನು ಸಮಾಜ ಪರಿವರ್ತನ ಸಮುದಾಯ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News