ಪೌರತ್ವವನ್ನು ದಾಖಲೆಯಿಂದಲ್ಲ, ಡಿಎನ್ಎ ಮೂಲಕ ಪರೀಕ್ಷಿಸಲಿ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2019-12-19 06:42 GMT

ಚನ್ನರಾಯಪಟ್ಟಣ, ಡಿ.14: ದೇಶದ ಪೌರತ್ವವನ್ನು ದಾಖಲೆಯಿಂದಲ್ಲ, ಡಿಎನ್ಎ ಮೂಲಕ ಪರೀಕ್ಷೆಗೆ ಒಳಪಡಿಸಲಿ. ಯಾರು ಮೂಲ ನಿವಾಸಿಗಳು, ಯಾರು ಪರದೇಸಿಗಳು ಎಂದು ತಿಳಿಯುತ್ತದೆ ಎಂದು ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ನಡೆದ ಟಿಪ್ಪು ಸುಲ್ತಾನ್ ಸ್ಮರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಧ್ಯ ಏಷ್ಯಾದಿಂದ ಬಂದ ವ್ಯಕ್ತಿಗಳು ಈ ದೇಶದ ಮೂಲ ನಿವಾಸಿಗಳ ಪೌರತ್ವ ಪರೀಕ್ಷೆಗೆ ಮುಂದಾಗಿದ್ದಾರೆ. ವೈಜ್ಞಾನಿಕವಾಗಿ ಪೌರತ್ವ ಪರೀಕ್ಷೆಗೆ ಒಳಪಡಿಸಲಿ. ಡಿಎನ್ಎ ಮೂಲಕ ಪರೀಕ್ಷೆ ಮಾಡಲಿ, ಸತ್ಯ ಹೊರಬರುತ್ತದೆ ಎಂದರು.

ದಲಿತರು ಮತ್ತು ಮುಸ್ಲಿಮರು ಈ ದೇಶದ ಮೂಲ ನಿವಾಸಿಗಳು. ಈ ದೇಶ ಜಾತ್ಯತೀತ. ಇಲ್ಲಿ ಎಲ್ಲಾ ಧರ್ಮವೂ ಶ್ರೇಷ್ಠ. ರಾಷ್ಟ್ರದ ಧರ್ಮ ಸಂವಿಧಾನ. ಇದರ ಪಾಲನೆ ಮತ್ತು ರಕ್ಷಣೆ ನಮ್ಮ ಹೊಣೆ ಎಂದರು.

ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದದ್ದು ಒಂದು ಟಿಪ್ಪುವಿನ ಖಡ್ಗ ಮತ್ತು ಅಂಬೇಡ್ಕರ್ ಅವರ ಪೆನ್ನು. ರಾಜ ಧರ್ಮದ ಮೂಲಕ ನೈತಿಕವಾಗಿ ಆಡಳಿತ ನಡೆಸಿದವರು ಟಿಪ್ಪು ಸುಲ್ತಾನ್. ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಪೆನ್ನಿನ ಮೂಲಕ ಸರ್ವ ಸಮಾಜಕ್ಕೆ ನ್ಯಾಯವನ್ನು ನೀಡಿದರು ಎಂದು ವಿವರಿಸಿದರು.

ಟಿಪ್ಪು ಸುಲ್ತಾನ್ ದೇಶಕ್ಕಾಗಿ ತನ್ನ ಮಕ್ಕಳನ್ನು ಅಡವಿಟ್ಟವರು. ದಲಿತರಿಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿದರು. ದಲಿತರಿಗೆ ಸೈನ್ಯದಲ್ಲಿ ಸ್ಥಾನ ನೀಡಿದರು. ನನಗೆ ಟಿಪ್ಪು ಖಾನ್ ಎನ್ನುತ್ತಾರೆ. ಹೀಗೆ ಹೇಳಿದರೆ ನನಗೆ ಹೆಮ್ಮೆ ಇದೆ. ಕನ್ನಡಿಗನಿಗೆ ನನ್ನನ್ನು ಹೋಲಿಸಿದರೆ ನನಗೆ ಖುಷಿ ಹಾಗೂ ಗರ್ವ ಎಂದ ಅವರು, ಟಿಪ್ಪುವಿನ ಜಯಂತಿಯನ್ನು ರಾಜ್ಯ ಸರಕಾರ ರದ್ದು ಮಾಡುವ ಮೂಲಕ ಈ ಸರಕಾರ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಇದರಿಂದ ಟಿಪ್ಪುವಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಏಕೆಂದರೆ ಮೈಸೂರು ಹುಲಿ ಟಿಪ್ಪುವಿನ ಜಯಂತಿಯನ್ನು ಹುಲಿಗಳೇ ಆಚರಿಸಬೇಕು ಇಲಿಗಳಲ್ಲ ಎಂದು ಕುಟುಕಿದರು.

ಮಹಾತ್ಮ ಗಾಂದಿ ತನ್ನ ಯಂಗ್ ಇಂಡಿಯಾ ಪುಸ್ತಕದಲ್ಲಿ ಟಿಪ್ಪು ಭಾವೈಕ್ಯತೆಯ ಕೇಂದ್ರ, ವಜ್ರ ಎಂದು ಬರೆದಿದ್ದಾರೆ. ಹಾಗಾದರೆ ಗಾಂಧಿ ದೇಶ ದ್ರೋಹಿಯೇ ಎಂದು ಪ್ರಶ್ನಿಸಿದರು.

ವೇದಿಕೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನವೀನ್, ಡಿಂಡಗೂರು ಗೋವಿಂದ ರಾಜು, ದಲಿತ ಮುಖಂಡ ಮಂಜುನಾಥ, ಅಬ್ದುಲ್ ಸಮದ್, ಟಿಪ್ಪು ಸುಲ್ತಾನ್ ಇತಿಹಾಸ ಸಂರಕ್ಷಣಾ ಸಮಿತಿ ಮುಖಂಡ ಮುಬಶ್ಶಿರ್, ಪತ್ರಕರ್ತ ಮಲ್ನಾಡ್ ಮೆಹಬೂಬ್, ಕಾಂಗ್ರೆಸ್ ಮುಖಂಡ ಅಬ್ದುಲ್ ಹಾದಿ, ಜಬಿಉಲ್ಲ ಬೇಗ್, ಜಾವಿದ್, ಹಕ್, ಪರಾಗ್, ಮಂಜುನಾಥ್ ಕುರುವಂಕ, ಶಿಕ್ಷಕ ಮಂಜಪ್ಪ ಸೇರಿ ಅನೇಕ ಮಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News