ರಾಜ್ಯದ 181 ಕಡೆಗಳಲ್ಲಿ ಸಂಚಾರಿ ಮಾಂಸ ಮಾರಾಟ ಮಳಿಗೆ

Update: 2019-12-14 16:32 GMT

ಬೆಂಗಳೂರು, ಡಿ.14: ರಾಜ್ಯ ಸರಕಾರದ ಪಶು ಸಂಗೋಪನೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ರಾಜ್ಯದ ಹಲವು ಕಡೆಗಳಲ್ಲಿ ಕುರಿ ಮಾಂಸ ಹಾಗೂ ಮಾಂಸದಿಂದ ತಯಾರಿಸಿದ ಪದಾರ್ಥಗಳ ಸಂಚಾರಿ ಮಳಿಗೆ ತೆರೆಯಲಾಗುತ್ತಿದೆ.

ಕುರಿ ಮಾಂಸದ ಸಂಚಾರಿ ಮಳಿಗೆಗಳನ್ನು ತೆರೆಯುವ ಮೂಲಕ ಮಾಂಸ ಪ್ರಿಯರಿಗೆ ತಾಜಾ ಮಾಂಸದ ಊಟ ನೀಡಲು ಮುಂದಾಗಿದೆ. ಜತೆಗೆ ಆ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದ್ದು, ಸಂಚಾರಿ ವಾಹನಗಳಿಗೆ ಅಧಿಕೃತ ಚಾಲನೆಯೂ ಸಿಕ್ಕಿದೆ. ರಾಜ್ಯದ 181 ಕಡೆಗಳಲ್ಲಿ ಕುರಿ ಮಾಂಸ ಮತ್ತು ಮಾಂಸದಿಂದ ತಯಾರಿಸಿದ ಪದಾರ್ಥಗಳ ಸಂಚಾರಿ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ.

ರಾಜ್ಯ ಸರಕಾರ 2018-19 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಹಾಲು ಉತ್ಪಾದಕರ ಸಹಾಯ ಧನಕ್ಕೆ ನೀಡಿದ ಅನುದಾನದಲ್ಲಿ ಆಗಿನ ಪಶು ಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ, ಸರಕಾರದ ವತಿಯಿಂದಲೇ ಶುಚಿ ಹಾಗೂ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಮಾಂಸ ಹಾಗೂ ಅದರ ಉತ್ಪನ್ನಗಳ ಮಾರಾಟ ಮಾಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದರು. ಎಸೆಸೆಲ್ಸಿ ಉತ್ತೀರ್ಣರಾದ ಎಸ್ಸಿ, ಎಸ್ಟಿ ಸಮುದಾಯದ ನಿರುದ್ಯೋಗಿ ಯುವಕರಿಗೆ ಈ ಯೋಜನೆಯಲ್ಲಿ ಅವಕಾಶ ನೀಡಲಾಗಿದೆ. ಹಿಂದಿನ ಸರಕಾರದ ಉತ್ತಮ ಯೋಜನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಲಿ ಸಚಿವರು ಮುಂದಾಗಿದ್ದಾರೆ.

ಹೈದರಾಬಾದ್‌ನಲ್ಲಿ ತರಬೇತಿ: ಈಗಾಗಲೇ ರಾಜ್ಯಾದ್ಯಂತ ಸುಮಾರು 181 ಎಸ್ಸಿ ಹಾಗೂ ಎಸ್ಟಿ ನಿರುದ್ಯೋಗಿ ಯುವಕರನ್ನು ಪ್ರತಿ ಜಿಲ್ಲೆಗಳಿಂದ ಆಯ್ಕೆ ಮಾಡಲಾಗಿದೆ. ಹೈದರಾಬಾದ್‌ನ ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ.

8.25 ಲಕ್ಷ ಸಬ್ಸಿಡಿ: ಆಯ್ಕೆಯಾದವರಿಗೆ ನಿಗಮದಿಂದ 11 ಲಕ್ಷ ರೂ.ಗಳ ಧನ ಸಹಾಯ ನೀಡಲಾಗುತ್ತಿದ್ದು, ಆ ಹಣದಲ್ಲಿ ಫಲಾನುಭವಿಗಳು ಸಂಚಾರಿ ಮಾಂಸ ಮಾರಾಟ ವಾಹನ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸರಕಾರ ನೀಡಿರುವ ಅನುದಾನದಲ್ಲಿ 2.75 ಲಕ್ಷ ಮರು ಪಾವತಿಸಬೇಕು, ಉಳಿದ 8.25 ಲಕ್ಷ ಸಬ್ಸಿಡಿ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News