ದೇಶದ ನ್ಯಾಯಾಲಯಗಳು ಅಸಾಂವಿಧಾನಿಕ, ಪ್ರಜಾಪ್ರಭುತ್ವ ವಿರೋಧಿ ತೀರ್ಪುಗಳನ್ನು ನೀಡುತ್ತಿವೆ

Update: 2019-12-14 17:06 GMT

ಕೋಲಾರ, ಡಿ.14: ಇಂದು ದೇಶದ ನ್ಯಾಯಾಲಯಗಳ ತೀರ್ಪುಗಳು ಅಸಾಂವಿಧಾನಿಕ, ಜನವಿರೋಧಿ, ಪ್ರಜಾಪ್ರಭುತ್ವ ವಿರೋಧಿಯಾಗಿ ಕಂಡುಬರುತ್ತಿದ್ದು, ಜನಸಾಮಾನ್ಯರು ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಎನ್.ನಾಗಮೋಹನ್‍ ದಾಸ್ ಅಭಿಪ್ರಾಯಪಟ್ಟರು.

ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನಡೆದ ಸಮುದಾಯ ಕರ್ನಾಟಕ 'ಬಹುತ್ವ ಭಾರತ-ಬಲಿಷ್ಠ ಭಾರತ' 7ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾನೊಬ್ಬ ಕಾನೂನು ವಿದ್ಯಾರ್ಥಿಯಾಗಿ ಅನೇಕ ಹೋರಾಟಗಳನ್ನು ಮಾಡಿದ್ದೇನೆ. ಅದಕ್ಕಾಗಿ ಜೈಲಿಗೆ ಸಹ ಹೋಗಿ ಬಂದಿದ್ದೇನೆ. ಆದರೆ ಇಂದು ವಕೀಲರಲ್ಲೂ ಪ್ರತಿಭಟನಾ ಸ್ವರೂಪ ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ದೇಶದಲ್ಲಿ ಯಾವ ಯಾವ ಮಸೂದೆಗಳು ಅಂಗೀರವಾಗುತ್ತಿವೆಯೋ ಅವುಗಳ ಬಗ್ಗೆ ಪ್ರಶ್ನಿಸುವ ಅಧಿಕಾರ ಎಲ್ಲಾ ಸಂಸದರಿಗೂ ಇದೆ. ಆದರೆ ಅದು ಸಂಸತ್ತಿನಲ್ಲಿ ಚರ್ಚೆಯಾಗುತ್ತಿಲ್ಲ. ದೇಶದ ಪ್ರತಿ ಪ್ರಜೆಯೂ ಪ್ರಶ್ನೆ ಮಾಡುವ ಹಕ್ಕು ಉಳ್ಳವನಾಗಿದ್ದರೂ, ಶಾಸಕಾಂಗ, ಕಾರ್ಯಾಂಗ ಹೇಗೆ ನಡೀತಾ ಇದೆ ಎಂದು ಕೇಳುತ್ತಿಲ್ಲ ಎಂದು ಬೇಸರಪಟ್ಟರು. 

ಈ ಹಿಂದೆ ನಾನು ಒಬ್ಬ ಕಾನೂನು ವಿದ್ಯಾರ್ಥಿಯಾಗಿ ಹಲವು ಹೋರಾಟಗಾರರಿಗೆ 'ಬರೀ ಬೀದಿ ಹೋರಾಟ ಮಾಡಿದರೆ ಸಾಲದು, ಬದಲಾಗಿ ಕಾನೂನು ಹೋರಾಟ ಮಾಡಿ' ಎಂದು ಸಲಹೆ ನೀಡುತ್ತಿದ್ದೆ. ಆಗ ನ್ಯಾಯಾಂಗದ ಮೇಲೆ ಒಂದಿಷ್ಟು ಭರವಸೆ-ನಂಬಿಕೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಬೆಳವಣಿಗೆ ಕಂಡು ನನ್ನಲ್ಲಿದ್ದ ಆ ಒಂದಿಷ್ಟು ನಂಬಿಕೆ ಕೂಡ ಸಂಪೂರ್ಣವಾಗಿ ನಿಂತು ಹೋಗಿದೆ ಎಂದು ನ್ಯಾಯಾಂಗ ವ್ಯವಸ್ಥೆಯಲ್ಲಿನ ದೋಷಪೂರಿತ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ ವಿಷಾದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News