ಬಿಸಿ ಸಾರು ಬಿದ್ದು ಗಾಯಗೊಂಡ ಮಕ್ಕಳನ್ನು ಭೇಟಿಯಾದ ಸಚಿವೆ ಶಶಿಕಲಾ ಜೊಲ್ಲೆ

Update: 2019-12-14 18:07 GMT

ಬೆಳಗಾವಿ, ಡಿ.13: ಖಾನಾಪುರ ತಾಲೂಕಿನ ಅಂಗನವಾಡಿಯಲ್ಲಿ ಆಕಸ್ಮಿಕವಾಗಿ ಬಿಸಿ ಸಾರು ಬಿದ್ದು, ತೀವ್ರವಾಗಿ ಗಾಯಗೊಂಡಿರುವ ಮಕ್ಕಳನ್ನು ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಶನಿವಾರ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳು ಸಂಪೂರ್ಣ ಗುಣಮುಖರಾಗುವವರೆಗೆ ಚಿಕಿತ್ಸೆಯನ್ನು ಮುಂದುವರಿಸುವುದರ ಜತೆಗೆ ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಇಲಾಖೆಯ ವತಿಯಿಂದ ಪಾವತಿಸಲಾಗುವುದು ಎಂದು ಭರವಸೆ ನೀಡಿದರು.

ಮಕ್ಕಳ ಚಿಕಿತ್ಸೆ ಕುರಿತು ವೈದ್ಯರ ಜತೆ ಚರ್ಚಿಸಿದ ಅವರು, ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸಲಾಗುವುದು. ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗುವರೆಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಖಾನಾಪುರ ತಾಲೂಕಿನ ಗೋಲ್ಯಾಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬಿಸಿ ಸಾರಿನ ಪಾತ್ರೆ ಬಿದ್ದು, ಮೂರು ಮಕ್ಕಳು ಮತ್ತು ಅಂಗನವಾಡಿ ಸಹಾಯಕಿ ಗಾಯಗೊಂಡಿದ್ದರು. ಘಟನೆ ನಡೆದ ದಿನ ಬೆಂಗಳೂರಿನಲ್ಲಿ ಇದ್ದ ಸಚಿವರು, ಬೆಳಗಾವಿಗೆ ಬಂದ ತಕ್ಷಣವೇ ಮಕ್ಕಳನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಆ ಪ್ರಕಾರ ಇಂದು ನೇರವಾಗಿ ಆಸ್ಪತ್ರೆಗೆ ತೆರಳಿ ಮಕ್ಕಳ ಆರೋಗ್ಯ ವಿಚಾರಿಸಿದರು. ಘಟನೆಯ ಬಗ್ಗೆ ಸಚಿವರಿಗೆ ತಕ್ಷಣವೇ ಮಾಹಿತಿಯನ್ನು ನೀಡಲಾಗಿತ್ತು. ಅವರ ಸೂಚನೆಯ ಮೇರೆಗೆ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂಪೂರ್ಣ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News