ಅಗತ್ಯಬಿದ್ದರೆ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮಾರ್ಪಾಡು: ಅಮಿತ್ ಶಾ

Update: 2019-12-19 07:10 GMT

ಧನಬಾದ್/ ರಾಂಚಿ, ಡಿ.15: ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದ ಬಳಿಕ ಮೊಟ್ಟಮೊದಲ ಸಾರ್ವಜನಿಕ ರ್ಯಾಲಿಯಲ್ಲಿ ಈ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಈಶಾನ್ಯ ರಾಜ್ಯಗಳ ಕಳಕಳಿಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಯ್ದೆಯ ಅಂಶಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಸಿದ್ಧ" ಎಂದು ಘೋಷಿಸಿದ್ದಾರೆ.

"ಮೇಘಾಲಯ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ ಮತ್ತು ಸಂಪುಟ ಸಚಿವರು ಶುಕ್ರವಾರ, ರಾಜ್ಯಗಳಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂಥ ಯಾವ ಸಮಸ್ಯೆಯೂ ಇಲ್ಲ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಕಾಯ್ದೆಯಲ್ಲಿ ಕೆಲ ಬದಲಾವಣೆಗಳು ಆಗಲೇಬೇಕು ಎಂದು ಒತ್ತಡ ತಂದಾಗ, ಕ್ರಿಸ್‌ಮಸ್ ಬಳಿಕ ಭೇಟಿಯಾಗಲು ಸೂಚಿಸಿದ್ದೇನೆ. ಈ ಸಂಬಂಧ ರಚನಾತ್ಮಕ ಚರ್ಚೆ ನಡೆಸಿ ಮೇಘಾಲಯದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದೇನೆ" ಎಂದು ಗಿರಿಧ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸ್ಪಷ್ಟಪಡಿಸಿದರು.

ಬಳಿಕ ಧನಬಾದ್‌ನಲ್ಲಿ ನಡೆದ ಇನ್ನೊಂದು ರ್ಯಾಲಿಯಲ್ಲಿ ಮಾತನಾಡಿದ ಶಾ, "ನಾವು ಸಿಎಬಿ ಮಂಡಿಸಿದಾಗ ಕಾಂಗ್ರೆಸ್‌ಗೆ ಹೊಟ್ಟೆನೋವು ಆರಂಭವಾದಂತಿದೆ. ಹಲವು ವರ್ಷಗಳಿಂದ ಇತರ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ನಿರಾಶ್ರಿತರಂತೆ ಬದುಕುತಿದ್ದಾರೆ. ಅವರಿಗೆ ಪೌರತ್ವ ನೀಡುವುದು ಬೇಡವೇ? ನಾವು ಮುಸ್ಲಿಂ ವಿರೋಧಿ ಎಂದು ಕಾಂಗ್ರೆಸ್ ಹೇಳುತ್ತಿದೆ... ನಾವು ಸಿಎಬಿ ತಂದಾಗ ಅವರು ಈಶಾನ್ಯ ರಾಜ್ಯಗಳಲ್ಲಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಪಕ್ಷ ಹಿಂದೂ-ಮುಸ್ಲಿಂ ರಾಜಕೀಯದಲ್ಲಿ ಶಾಮೀಲಾಗಿದೆ ಹಾಗೂ ನಕ್ಸಲೀಯತೆಯನ್ನು ಪ್ರಚೋದಿಸುತ್ತಿದೆ. ತನ್ನ ಆಧಿಕಾರಾವಧಿಯಲ್ಲಿ ಭಯೋತ್ಪಾದನೆಯನ್ನು ತಡೆಯಲು ವಿಫಲವಾಗಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News