ಹನೂರು: ಸುಳ್ವಾಡಿ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ

Update: 2019-12-15 06:08 GMT

ಹನೂರು, ಡಿ.15: ಸುಳ್ವಾಡಿ ದುರಂತದ ಪ್ರಥಮ ಶ್ರದ್ಧಾಂಜಲಿ ಸಭೆ ಕೇವಲ ಶ್ರದ್ಧಾಂಜಲಿ ಸಭೆ ಅಲ್ಲ, ಸ್ಮರಣೆಯ ಸಭೆ ಕೂಡ ಹೌದೂ ಎಂದು ಹನೂರು ಶಾಸಕ ನರೇಂದ್ರ ರಾಜೂಗೌಡ ಹೇಳಿದರು.

ಹನೂರು ತಾಲೂಕಿನ ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರಿಗೆ ಪ್ರಥಮ ವರ್ಷದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

 ಸುಳ್ವಾಡಿ ಸಂತ್ರಸ್ತರಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಏನೂ ಮಾಡಿಲ್ಲ ಎಂಬ ಆರೋಪ ಮಾಡುತ್ತಿದ್ದು, ಜನರಿಗೆ ಮಾಹಿತಿ ಕೊರತೆ ಇದೆ. ಸಂತ್ರಸ್ತರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗಿದೆ ಎಂದು ಶಾಸಕರು ವಿವರಿಸಿದರು.

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಪುನರಾರಂಭ: 

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ತಹಶೀಲ್ದಾರರು ಆಡಳಿತಾಧಿಕಾರಿಯಾಗಿದ್ದಾರೆ. ಸುರೇಶ್ ಎಂಬ ಅಧಿಕಾರಿಯನ್ನು ಪ್ರತ್ಯೇಕವಾಗಿ ನೇಮಿಸಲಾಗಿದೆ ಎಂದು ಹೇಳಿದರು. ದೇವಸ್ಥಾನವನ್ನು ಪುನರಾರಂಭ ಮಾಡುವುದಕ್ಕೆ ಮುಂಚೆ ಹೋಮ ಮಾಡಬೇಕಾಗಿರುವುದರಿಂದ ಆಗಮಿಕರು ಬಂದು ಹೋಮ ಮಾಡುವಂತೆ ಮುಜರಾಯಿ ಇಲಾಖೆಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದು, ಇನ್ನು 10-15 ದಿನಗಳೊಳಗೆ ಹೋಮ ಮಾಡಿದ ನಂತರ ಕಿಚ್ಚುಗುತ್ತಿ ಮಾರಮ್ಮದೇವಸ್ಥಾನ ಪುನರಾರಂಭ ಮಾಡಲಾಗುವುದು ಎಂದು ಶಾಸಕರು ಹೇಳಿದರು.  

ಈ ಸಂದರ್ಭದಲ್ಲಿ  ಜಿಪಂ ಸದಸ್ಯ ಬಸವರಾಜು, ತಾಪಂ ಅದ್ಯಕ್ಷ ರಾಜೇಂದ್ರ, ಸದಸ್ಯ ನಟರಾಜು, ಮಾರ್ಟಳ್ಳಿ ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಬಾಯಿ, ಸದಸ್ಯ ರಾಮಲಿಂಗ, ಧರ್ಮಗುರುಟೆನ್ನಿಕುರಿಯನ್, ವಕೀಲ ಮಹದೇವ, ತಮಿಳುನಾಡಿನ ನಿವೃತ್ತ ಜಿಲ್ಲಾ ಮುಖ್ಯ ನ್ಯಾಯಾದೀಶ ಸಾತ್ತಪಿಳೈ, ಮುಖಂಡರಾದ ಈಶ್ವರ್, ಮಣಿ, ದಸಂಸ ಮುಖಂಡ ಸಿದ್ದರಾಜು, ಸಮಾಜ ಸೇವಕ ಜಾನ್ಬಾಸ್ಕೋ, ಹೋಲಿಕ್ರಾಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಂತ್ರಸ್ತರು ಮತ್ತು ಹನೂರು ಜೆಡಿಎಸ್ ಮುಖಂಡರಾದ ಮಂಜೇಶ್, ಸತೀಶ್, ರಾಜೇಶ್ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News