‘ಸಿಎಬಿ’ಯಿಂದ ಮುಸ್ಲಿಮರಿಗೆ ತೊಂದರೆ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ
Update: 2019-12-15 18:30 IST
ಹುಬ್ಬಳ್ಳಿ, ಡಿ.15:ಭಾರತೀಯ ಮುಸ್ಲಿಮರಿಗೆ ಪೌರತ್ವ (ತಿದ್ದುಪಡಿ) ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ರವಿವಾರ ಧಾರವಾಡ ಮತ್ತು ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಸಿದ್ದಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರಕಾರ ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ ಸಚಿವರಿಗೆ ಸನ್ಮಾನ ಕಾರ್ಯಕ್ರಮದ ಬಳಿ ಅವರು ಮಾತನಾಡಿದರು.
ಸಿಎಬಿ ಕುರಿತು ಮುಸ್ಲಿಮರು ಸೇರಿದಂತೆ ಯಾರು ಸಹ ಆತಂಕಪಡುವ ಅಗತ್ಯತೆ ಇಲ್ಲ. ಅಲ್ಲದೆ, ನೆರೆಹೊರೆಯ ದೇಶಗಳಲ್ಲಿ ಮತೀಯ ಹಿಂಸೆಯನ್ನು ತಾಳಲಾರದೆ ಭಾರತಕ್ಕೆ ವಲಸೆ ಬಂದವರಿಗೆ ಈ ದೇಶದ ಪೌರತ್ವ ನೀಡುವುದು ಕಾಯ್ದೆಯ ಉದ್ದೇಶವಾಗಿದೆ ಎಂದರು.
ಸಿಎಬಿ, ಎನ್‌ಆರ್‌ಸಿ ಕುರಿತು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದವರು ಅನಗತ್ಯವಾಗಿ ಗೊಂದಲ ಸೃಷ್ಟಿಸಿ ದೇಶದಲ್ಲಿ ದೊಂಬಿ, ಗಲಾಟೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.