ರಮೇಶ್ ಜಾರಕಿಹೊಳಿ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

Update: 2019-12-19 07:11 GMT

ಬೆಳಗಾವಿ, ಡಿ. 15: ‘ಉಪಚುನಾವಣೆಯಲ್ಲಿ ಆಯ್ಕೆಯಾದ ‘ಅರ್ಹರು’ ಮತ್ತು ಬಿಜೆಪಿ ಅಸಮಾಧಾನಿತರು ಯಡಿಯೂರಪ್ಪ ಸರಕಾರವನ್ನು ಅಲ್ಲಾಡಿಸುವುದು ನಿಶ್ಚಿತ. ಈಗಾಗಲೇ ರಮೇಶ್ ಜಾರಕಿಹೊಳಿ ಬ್ಲ್ಯಾಕ್‌ ಮೇಲ್ ರಾಜಕಾರಣ ಆರಂಭವಾಗಿದೆ’ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಗೋಕಾಕ್ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಜಾರಕಿಹೊಳಿ ಸಹೋದರರು ಒಂದಲ್ಲ ಎಂಬುದು ಸಾಬೀತಾಗಿದೆ. ರಮೇಶ್ ಮತ್ತವರ ಅಳಿಯಂದಿರ ವಿರುದ್ಧ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.

ಬೆದರಿಸಲು ಸಿದ್ದು ಭೇಟಿ: ಅಧಿವೇಶನದಲ್ಲಿ ತನ್ನ ವಿರುದ್ಧ ಮಾತನಾಡಬಾರದು ಎಂದು ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ನಾನು ಹೇಳಿದಂತೆ ಕೇಳದಿದ್ದರೆ ಕಾಂಗ್ರೆಸ್‌ಗೆ ಹೋಗ್ತೀನಿ ಎಂಬ ಸಂದೇಶವನ್ನು ಬಿಜೆಪಿಗೆ ಸಿದ್ದರಾಮಯ್ಯ ಭೇಟಿ ಮೂಲಕ ರಮೇಶ್ ನೀಡಿದ್ದಾರೆಂದು ಸತೀಶ್ ಜಾರಕಿಹೊಳಿ ಟೀಕಿಸಿದರು.

ದುಡ್ಡು ಮಾಡಬೇಕು, ಅಧಿಕಾರ ಮಜಾ ಮಾಡಬೇಕೆಂಬುದಷ್ಟೇ ರಮೇಶ್ ಉದ್ದೇಶ. ತನಗೆ ನೀರಾವರಿ ಸಚಿವ ಸ್ಥಾನ ನೀಡಬೇಕು. ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಸಿದ್ದರಾಮಯ್ಯರ ಬಳಿ ಹೋಗಿದ್ದಾರೆ. ಆದರೆ, ಇವರ ಗೋಕಾಕ್‌ನಲ್ಲಿ ಒಂದು ಸರಕಾರಿ ಕಾಲೇಜು ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಂದಿನ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ರಕ್ಷಣೆಗೆ ಯಾರೂ ಬರುವುದಿಲ್ಲ. ಆಗ ಯಡಿಯೂರಪ್ಪ, ಬಾಲಚಂದ್ರ ಪಡೆಯೂ ಬರುವುದಿಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ನಾವು ಪಕ್ಷ ಬಲಪಡಿಸಬೇಕಾಗಿದೆ. ಇನ್ನೂ ಮೂರು ವರ್ಷ ಬಳಿಕವೇ ರಮೇಶ್ ಹಳ್ಳಿಗೆ ಬರುವುದು ಎಂದು ಟೀಕಿಸಿದರು. ಉಪಚುನಾವಣೆಯಲ್ಲಿ ಸೊಸೆಗೆ ಬಹಳ ಸಿಂಗಾರ ಮಾಡಿದರು. ಮುಂದಿನ ಚುನಾವಣೆಗೆ ಈ ಸೊಸೆ ಹಳೆದಾಗಿ ಹೋಗಿರುತ್ತಾಳೆ. ಇನ್ನು ಮೂರು ವರ್ಷಕ್ಕೆ ಹಳೆಯದಾಗಿ ಹೋಗಿರುತ್ತದೆ ಈ ಗಿರಾಕಿ ಎಂದು ಸತೀಶ್ ಜಾರಕಿಹೊಳಿ ಲೇವಡಿ ಮಾಡಿದರು.

ಗೋಕಾಕ್ ಕ್ಷೇತ್ರದ ಪ್ರಚಾರಕ್ಕೆ ಬಿಎಸ್‌ವೈ ಬರದಿದ್ದರೆ ರಮೇಶ್ ಜಾರಕಿಹೊಳಿ ಮೂರನೆ ಸ್ಥಾನಕ್ಕೆ ತಳ್ಳಲ್ಪಡುತ್ತಿದ್ದರು. ಯಡಿಯೂರಪ್ಪ, ಬಾಲಚಂದ್ರ ಬಂದಿದ್ದ ಕಾರಣ ರಮೇಶ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಲಕ್ಷಾಂತರ ರೂ.ಖರ್ಚು ಮಾಡಿ ಗೆಲುವು ಸಾಧಿಸಿದ್ದಾರೆಂದು ಆರೋಪ ಮಾಡಿದರು.

ಕ್ಷೇತ್ರದ ಜನರ ಜತೆ ಲಖನ್ ಜಾರಕಿಹೊಳಿ ಇರಲಿದ್ದು, ಕೆಲಸ ಮಾಡುವವರ ಮನೆ ಬಾಗಿಲಿಗೆ ಟಿಕೆಟ್ ಬರುತ್ತದೆ. ಮೊದಲು ಸಂಘಟನೆ ಮಾಡಬೇಕು. ಏನೇ ಆದರೂ ಒಳ್ಳೆಯದಕ್ಕೆ ಆಗುತ್ತದೆ. ಹೀಗಾಗಿ ಲಖನ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

‘ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಿದರೆ ಬಿಜೆಪಿ ಜಲ(ನೀರು) ಪಾಲಾಗಲಿದ್ದು, ಸಂಪನ್ಮೂಲ ಸಂಪೂರ್ಣ ರಮೇಶ್ ಜಾರಕಿಹೊಳಿ ಜೇಬು ಸೇರಲಿದೆ. ಹೀಗಾಗಿ ಅವರಿಗೆ ಬಿಜೆಪಿ ಯಾವುದೇ ಸ್ಥಾನ ನೀಡಬಾರದು’

-ಲಖನ್ ಜಾರಕಿಹೊಳಿ, ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News