ಆಸ್ತಿ ಹಂಚಿಕೆಯಾದ ಮೇಲೆ ಬೀದಿಗೆ ತಳ್ಳಿದ ಮಕ್ಕಳು: ಕೋರ್ಟ್ ಮೆಟ್ಟಿಲೇರಿ ಜಮೀನು ವಾಪಸ್ ಪಡೆದ ಪೋಷಕರು

Update: 2019-12-15 14:26 GMT

ಕೊಪ್ಪಳ, ಡಿ.15: ಮಕ್ಕಳಿಗೆ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿ ಮಾಡಿ ಎನ್ನುವ ಮಾತಿದೆ. ಆದರೆ, ಕೊಪ್ಪಳದಲ್ಲಿ ಪೋಷಕರೊಬ್ಬರು ಮಕ್ಕಳಿಗಾಗಿ ಆಸ್ತಿ ಮಾಡಿ ಬೀದಿಗೆ ಬಂದಿರುವ ಘಟನೆ ನಡೆದಿದೆ.

ಜಿಲ್ಲೆಯ ಗಂಗಾವತಿ ನಗರದ ಸತ್ಯನಾರಾಯಣಪೇಟೆಯ ನಿವಾಸಿ ಮನೋಹರ್ ದೇಸಾಯಿ ಅವರಿಗೆ 6 ಮಕ್ಕಳು. ಅದರಲ್ಲಿ 3 ಗಂಡು ಹಾಗೂ 3 ಜನ ಹೆಣ್ಣು ಮಕ್ಕಳಿದ್ದಾರೆ. ಕೃಷಿಯನ್ನೇ ನಂಬಿಕೊಂಡು ಬಂದ ಇವರು ತಮ್ಮ ಮಕ್ಕಳಾದ ರಾಘವೇಂದ್ರ, ಯೋಗೇಶ್, ವಿನಯ್ ದೇಸಾಯಿ ಹೆಸರಿಗೆ ತಮ್ಮ 3 ಎಕರೆ ಜಮೀನನ್ನು ರಿಜಿಸ್ಟ್ರಾರ್ ಮಾಡಿಕೊಟ್ಟಿದ್ದರು.

ಆದರೆ ಮಕ್ಕಳು, ಮುಪ್ಪಿನಲ್ಲಿರುವ ತಂದೆಯ ಜೀವನೋಪಾಯಕ್ಕೆ ಮತ್ತು ಚಿಕಿತ್ಸೆಗೂ ಹಣ ಕೊಡದೇ ಬೀದಿಗೆ ತಳ್ಳಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮನೋಹರ್ ದೇಸಾಯಿ, ಹಿರಿಯ ನಾಗರಿಕ ರಕ್ಷಣೆ ಕಾಯ್ದೆ ಅಡಿಯಲ್ಲಿ ನನಗೆ ನ್ಯಾಯ ಕೊಡಿಸಿ ಎಂದು ಕೊಪ್ಪಳ ಎಸಿ ಕೋರ್ಟ್ ಮೊರೆ ಹೋಗಿದ್ದರು. ಇದರಂತೆ, ಎಸಿ ಗೀತಾ ಅವರು ಮನೋಹರ್ ದೇಸಾಯಿ ಅವರ ಮಕ್ಕಳಾದ ರಾಘವೇಂದ್ರ, ಯೋಗೇಶ್ ಹಾಗೂ ವಿನಯ್ ದೇಸಾಯಿ ಹೆಸರಿನಲ್ಲಿರುವ 3 ಎಕರೆ ಆಸ್ತಿಯನ್ನು ಮರಳಿ ಮನೋಹರ್ ದೇಸಾಯಿ ಹೆಸರಿಗೆ ನೋಂದಾಯಿಸಲು ಖಡಕ್ ಆದೇಶ ನೀಡಿದ್ದಾರೆ. 

ಇಷ್ಟೇ ಅಲ್ಲದೇ ಇನ್ನೂ ಸಾಕಷ್ಟು ಭೂಮಿ ಮಕ್ಕಳ ಹೆಸರಿನಲ್ಲಿ ಇದ್ದು, ಅದನ್ನು ಅವರೇ ಅನುಭವಿಸಲಿ ಅಂತ ದೇಸಾಯಿ ಹೇಳಿದ್ದಾರೆ. ಇದರ ಜೊತೆಗೆ ಮಕ್ಕಳು ಜನ್ಮ ನೀಡಿದ ತಂದೆ ತಾಯಿಯನ್ನು ಆಸ್ತಿಗಾಗಿ ದೂರ ಮಾಡಬೇಡಿ. ಅವರಿಗಾಗಿ ಒಂದಿಷ್ಟು ಕಾಳಜಿ, ಪ್ರೀತಿ ತೋರಿಸಿ ಎಂದು ಹೇಳಿದರು. ಕೊಪ್ಪಳದಲ್ಲಿ ಇಂಥ 12 ಪ್ರಕರಣಗಳು ಎಸಿ ಕೋರ್ಟ್‌ನಲ್ಲಿದ್ದು, ಈಗಾಗಲೇ 6 ಕೇಸ್‌ಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ ಕೇಸ್‌ಗಳ ವಿಚಾರಣೆ ನಡೆಯುತ್ತಿದೆ. ಮಕ್ಕಳಿಂದ ಹಿರಿಯ ನಾಗರಿಕರಿಗೆ ತೊಂದರೆಯಾದರೆ ವೃದ್ಧಾಶ್ರಮ ಸೇರುವ ಮುನ್ನ ಒಮ್ಮೆ ಎಸಿ ಕೋರ್ಟ್ ಮೆಟ್ಟಿಲು ಏರಿ ನ್ಯಾಯ ಪಡೆಯಬಹುದು. ಅಲ್ಲದೆ, ಅಧಿಕಾರಿಗಳು ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸಹ ಮಾಡಬೇಕಾಗಿದೆ ಎಂದು ಕೊಪ್ಪಳ ಎಸಿ ಗೀತಾ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News