ಸಂತ್ರಸ್ತರು ಮನೆ ನಿರ್ಮಾಣ ಕಾರ್ಯ ಬೇಗನೆ ಪೂರ್ಣಗೊಳಿಸಿ: ಯಡಿಯೂರಪ್ಪ ಮನವಿ

Update: 2019-12-15 14:50 GMT

ಬೆಂಗಳೂರು, ಡಿ. 15: ನೆರೆ ಸಂತ್ರಸ್ತರು ಕೂಡಲೇ ಮನೆ ನಿರ್ಮಾಣವನ್ನು ಪ್ರಾರಂಭಿಸಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಮುಂಗಾರಿನಲ್ಲಿ ಸುರಿದ ಮಳೆ ಹಾಗೂ ಪ್ರವಾಹದ ಕಾರಣ ಲಕ್ಷಾಂತರ ಕುಟುಂಬಗಳು ಮನೆ ಕಳೆದುಕೊಂಡಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ಸಾರ್ವಜನಿಕ ಆಸ್ತಿ-ಪಾಸ್ತಿಯೂ ಹಾನಿಗೀಡಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಕೋಪದ ಸಂದರ್ಭದಲ್ಲಿ ಸಮರ್ಥವಾಗಿ ಎದುರಿಸಿದ ಸರಕಾರ ಜನರ ನೆರವಿಗೆ ಧಾವಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರವಾಹದಿಂದ ತೀವ್ರ ಹಾನಿಗೀಡಾದ ಎ-ಬಿ ವರ್ಗದ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ ರೂ.ನೆರವು ಘೋಷಿಸಲಾಗಿದೆ. ನೆರೆ ಸಂತ್ರಸ್ತರ ಸ್ಥಿತಿಯನ್ನು ಮನಗಂಡು 5ಲಕ್ಷ ರೂ.ಗಳ ಪೈಕಿ 1 ಲಕ್ಷ ರೂ.ಗಳನ್ನು ಈಗಾಗಲೇ ಮುಂಗಡವಾಗಿ ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಪಾವತಿಸಲಾಗಿದೆ.

ಉಳಿದ 4ಲಕ್ಷ ರೂ.ಗಳ ಅನುದಾನವನ್ನು ನಿರ್ಮಣವಾಗುತ್ತಿರುವ ಮನೆಯ ಹಂತವಾರು ಜಿಪಿಎಸ್ ಛಾಯಾಚಿತ್ರಗಳ ಆಧರಿಸಿ ಬಿಡುಗಡೆ ಮಾಡಲಾಗುವುದು. ಪ್ರಕೃತಿ ವಿಕೋಪಕ್ಕೆ ಎದೆಗುಂದದಿರಿ. ನಿಮ್ಮ ಬದುಕನ್ನು ಪುನಃ ಕಟ್ಟಿಕೊಳ್ಳಲು ಸರಕಾರ ನಿಮ್ಮೊಂದಿಗಿದೆ ಎಂದು ಬಿಎಸ್‌ವೈ ಪ್ರಕಟಣೆಯಲ್ಲಿ ಅಭಯ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News