ಜನರಿಗೆ ಮೋದಿಯಷ್ಟು ನಂಬಿಕೆ ದ್ರೋಹ ಮಾಡಿದವರು ಬೇರೆ ಯಾರೂ ಇಲ್ಲ: ಸಾಹಿತಿ ದೇವನೂರು ಮಹಾದೇವ

Update: 2019-12-19 07:10 GMT

ಮೈಸೂರು,ಡಿ.15: ಇತ್ತೀಚಿನ ದಿನಗಳಲ್ಲಿ ಜನರು ನರೇಂದ್ರ ಮೋದಿಯವರನ್ನು ನಂಬಿದಷ್ಟು ಬಹುಶಃ ಬೇರೆ ಯಾರನ್ನೂ ನಂಬಿಲ್ಲ. ಹಾಗೇನೆ ಮೋದಿಯವರಷ್ಟು ಜನರಿಗೆ ನಂಬಿಕೆ ದ್ರೋಹ ಮಾಡಿದವರೂ ಬೇರೆ ಯಾರೂ ಇಲ್ಲ ಅಂತಲೂ ಅನಿಸುತ್ತಿದೆ. ಈ ಮಾತನ್ನು ನೋವಿನಿಂದ ನುಡಿಯುತ್ತಿದ್ದೇನೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪೌರತ್ವ ಕಾಯಿದೆ ಮತ್ತು ಎನ್‍ಆರ್‍ಸಿ ಜಾರಿ ವಿರೋಧಿಸಿ ಮಾತನಾಡಿದ ಅವರು, ಜನರು ಕಣ್ಣು ಮುಚ್ಚಿಕೊಂಡು ಹುಚ್ಚೆದ್ದು ಮೋದಿಯನ್ನು ನಂಬಿದರು. ಈ ನಂಬಿಕೆಗೆ ನಾವು ತೆತ್ತ ಬೆಲೆ ಎಷ್ಟು? ದೇಶ ಇದನ್ನು ಲೆಕ್ಕ ಹಾಕಬೇಕಾಗಿದೆ. ಮೋದಿಯವರು ನಂಬಿಸಿದ್ದು, ಜನರು ನಂಬಿದ್ದು ಒಂದಾ ಎರಡಾ? ವಿದೇಶದಲ್ಲಿ ಇಟ್ಟಿರುವ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಹಾಕುತ್ತೇನೆ ಅಂದರು. ಜನ ನಂಬಿದರು. ಇನ್ನೂ ನಂಬಿಕೊಂಡು ಕಾಯುತ್ತಿರುವವರು ಇರಬಹುದು. ಆದರೆ ಜನರು ತಾವು ಬ್ಯಾಂಕಿನಲ್ಲಿ ಇಟ್ಟ ಹಣಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಹೇಳಿದರು.

ಪೌರತ್ವ ತಿದ್ದುಪಡಿಯನ್ನು ಕಾಯ್ದೆ ಮಾಡಿದ ಮೇಲೆ ಆತಂಕಗೊಂಡ ಜನ ಸಮುದಾಯವನ್ನು ಉದ್ದೇಶಿಸಿ ನಮ್ಮ ಪ್ರಧಾನಿಯವರು “ಆತಂಕಕ್ಕೆ ಒಳಗಾಗಬೇಡಿ, ನನ್ನನ್ನು ನಂಬಿ, ನಾನು ನಿಮ್ಮ ಸೇವಕ” ಅಂತ ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿದಾಗ ಪ್ರಧಾನಿ ಮೋದಿಯವರ ಮಾತಿಗೂ ಕನ್ನಡದ ಸೀರಿಯಲ್ 'ಸಿಲ್ಲಿ ಲಲ್ಲಿ'ಯ ಸಮಾಜ ಸೇವಕಿ ಲಲಿತಾಂಬ ಮಾತಿಗೂ ತಾಳಮೇಳ ಆಗುತ್ತಿದೆಯಲ್ಲಾ ಅನ್ನಿಸಿಬಿಟ್ಟಿತು ಎಂದು ವ್ಯಂಗ್ಯವಾಡಿದರು.

ನಿರುದ್ಯೋಗ ಕಳೆದ 45 ವರ್ಷಗಳಲ್ಲಿ ಹೆಚ್ಚು ನಷ್ಟವಾಗಿವೆ. ಹೀಗೇನೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಅಂದರು. ಆದರೆ ರೈತರ ಸಂಕಷ್ಟ ದುಪ್ಪಟ್ಟು ಆಗುತ್ತಿದೆ. ನೋಟು ಬ್ಯಾನ್‍ನಿಂದಾದ ಅನಾಹುತಗಳು ಭಾರತವನ್ನು ಇನ್ನೂ ಸುಡುತ್ತಿದೆ. ಪ್ರಧಾನಿ ಮೋದಿಯವರ ವಚನಗಳಿಗೆ ಇನ್ನೇನು ಮೂರು ವರ್ಷಗಳು ತುಂಬಿದೆ. ಎಲ್ಲವೂ ಮಹಾಭಾರತದ ಉತ್ತರನ ಪೌರುಷದಂತೆ ಕಂಡುಬರುತ್ತಿದೆ. ಇಲ್ಲಿ ನಂಬಿದವರ ತಪ್ಪೋ, ನಂಬಿಸಿದವರ ತಪ್ಪೋ ತಿಳಿಯದಾಗಿದೆ. ಜನ ಜಾತಿ, ಧರ್ಮ, ಭಾಷೆ ಇತ್ಯಾದಿ ನಂಬಿಕೆಗಳನ್ನು ಕೆರಳಿಸಿ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಈಗ ಜನಮುಖಿ ಸಂಘಟನೆಗಳು, ವಿರೋಧ ಪಕ್ಷಗಳು ಮಾತ್ರವಲ್ಲ ಆರೆಸ್ಸೆಸ್- ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಲ್ಲಿ ಇರುವ ಮುಗ್ಧರು, ಅಷ್ಟೇ ಯಾಕೆ ಜನಸಮುದಾಯ ಸೇರಿದಂತೆ ದೇಶವೂ ಮಾತಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ದೇವನೂರ ಮಹಾದೇವ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜವಾದಿ ಪ.ಮಲ್ಲೇಶ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸ್ವರಾಜ್ ಇಂಡಿಯಾದ ಶಬ್ಬೀರ್ ಮುಸ್ತಾಫ, ಅಭಿರುಚಿ ಗಣೇಶ್, ಸಿಪಿಐನ ಜಗದೀಶ್ ಸೂರ್ಯ, ಎಸ್‍ಯುಸಿಐನ ಉಮಾದೇವಿ, ಪಿಯುಸಿಎಲ್‍ನ ಪ್ರೊ. ಪಂಡಿತಾರಾಧ್ಯ, ದಸಂಸದ ಆಲಗೂಡು ಶಿವಕುಮಾರ್, ಸ್ವರಾಜ್ ಇಂಡಿಯಾದ ವಕೀಲ ಪುನೀತ್, ಸಿಪಿಎಂನ ಲ. ಜಗನ್ನಾಥ್ ಸೇರಿದಂತೆ  ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News