×
Ad

ದೇವೇಗೌಡರ ಕುಟುಂಬಕ್ಕೆ ಎಚ್ಚರಿಕೆ ನೀಡಿದವರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ

Update: 2019-12-15 23:58 IST

ಪಾಂಡವಪುರ, ಡಿ.15: ಮಾಜಿ ಪ್ರಧಾನಿ, ನಮ್ಮ ನಾಯಕರಾದ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಎಚ್ಚರಿಕೆ ನೀಡಿದ ಬಹಳಷ್ಟು ಜನರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಅವರು ಬಿಜೆಪಿ ಶಾಸಕ ಕೆ.ಸಿ.ನಾರಾಯಣಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ತಾಲೂಕಿನ ಐತಿಹಾಸಿಕ ತೊಣ್ಣೂರುಕೆರೆಗೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು, ನಮ್ಮ ನಾಯಕರಾದ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಕತ್ತಿ ಮಸೆಯಲು ಹೋದರೆ ಅದು ಅವರಿಗೆ ತಿರುಗುಬಾಣವಾಗಲಿದ್ದು, ಒಂದಲ್ಲ ಒಂದು ದಿನ ಅವರು ಮಣ್ಣಲ್ಲಿ ಮಣ್ಣಾಗಲಿದ್ದಾರೆ ಎಂದರು.

ನಮ್ಮ ಯಾವ ಶಾಸಕರು ಬಿಜೆಪಿ ಸಂಪರ್ಕದಲ್ಲಿಲ್ಲ. ಕೆ.ಸಿ.ನಾರಾಯಣಗೌಡ ಹಳೇ ಮೈಸೂರು ಪ್ರಾಂತ್ಯದ ಬಿಜೆಪಿ ಶಾಸಕರಾಗಿದ್ದಾರೆ. ಅವರ ಸಂಪರ್ಕದಲ್ಲಿ ಯಾರಿದ್ದಾರೆ ಎಂಬುದಾಗಿ ಅವರೇ ಹೇಳಬೇಕು ಎಂದು ತಿರುಗೇಟು ನೀಡಿದರು.

ಕೆ.ಸಿ.ನಾರಾಯಣಗೌಡ ಮೇಲೆ ನೋಡಿ ಉಗುಳನ್ನು ಉಗಿದರೆ ಅವರ ಮುಖಕ್ಕೆ ಅದು ಬಂದು ಬೀಳಲಿದೆ. ಹೀಗಾಗಿ ನಾರಾಯಣಗೌಡ ನನ್ನ ಸಹಪಾಠಿಯೇ ಅಲ್ಲ, ನನ್ನ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ. ಅಲ್ಲದೇ ಅವನ ಮೇಲೆ ನನಗೆ ಯಾವ ಜಿದ್ದು ಇಲ್ಲ. ನಾರಾಯಣಗೌಡರಿಗೆ ಎರಡು ಬಾರಿ ಬಿ ಫಾರಂ ಕೊಡಿಸಿದ್ದು ನಾನೇ, ಜತೆಗೆ ಅವರು ದೊಡ್ಡ ವ್ಯಾಪಾರಿಯಾಗಲು ನಾನೇ ಕಾರಣ ಎಂದು ಛೇಡಿಸಿದರು.

ನಾರಾಯಣಗೌಡರು ಸಣ್ಣ ನೀರಾವರಿ ಖಾತೆ ಪಡೆದರೆ ನನಗೇನು ಅಭ್ಯಂತರ ಇಲ್ಲ. ಜನರು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚಿಂತಿಸಲಿ. ಜತೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಬಿಡುಗಡೆ ಮಾಡಿದ್ದ 8.5 ಸಾವಿರ ಕೋಟಿ ಅನುದಾನವನ್ನು ಅನುಷ್ಠಾನಕ್ಕೆ ತಂದು ಇಡೀ ಜಿಲ್ಲೆ ಅಭಿವೃದ್ಧಿ ಮಾಡಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News