×
Ad

ಟಿಪ್ಪು ಪಠ್ಯ ವಿವಾದ: 'ತಜ್ಞರ ವರದಿ' ಬಗ್ಗೆ ಸಚಿವ ಸುರೇಶ್‌ ಕುಮಾರ್ ಪ್ರತಿಕ್ರಿಯೆ

Update: 2019-12-16 17:12 IST

ಬೆಂಗಳೂರು, ಡಿ. 16: ‘ಟಿಪ್ಪುಸುಲ್ತಾನ್ ಕುರಿತ ಪಠ್ಯವನ್ನು ಶಾಲಾ ಪುಸ್ತಕಗಳಿಂದ ಕೈಬಿಡುವ ವಿಚಾರಕ್ಕೆ ಸಂಬಂಧಿಸಿದ ತಜ್ಞರ ವರದಿ ಇನ್ನೂ ಬಂದಿಲ್ಲ. ವರದಿ ಬಂದ ಬಳಿಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಪಠ್ಯದ ಬಗ್ಗೆ ತಜ್ಞರ ವರದಿಯನ್ನು ನೋಡದೆ ಯಾವುದೇ ಪ್ರತಿಕ್ರಿಯೆ ನೀಡುವುದು ಸಲ್ಲ. ಹೀಗಾಗಿ ಈ ಬಗ್ಗೆ ನಾನೂ ಏನೂ ಹೇಳಲಾರೆ ಎಂದು ನಿರಾಕರಿಸಿದರು.

ಎರಡು ದಿನಗಳಲ್ಲಿ ನಿರ್ಧಾರ: ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ವಿಚಾರವಾಗಿ ಇನ್ನೂ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. 7ನೆ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸಲೇಬಾರದು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ತಕರಾರು ತೆಗೆದಿದೆ.

ಹೀಗಾಗಿ ಸಮಿತಿ ಸದಸ್ಯರೊಂದಿಗೆ ಚರ್ಚಿಸಲಾಗುವುದು. ಏಳನೆ ತರಗತಿಯಲ್ಲಿ ನಾವು ಯಾರನ್ನೂ ಅನುತ್ತೀರ್ಣಗೊಳಿಸುತ್ತಿಲ್ಲ. ಪಬ್ಲಿಕ್ ಪರೀಕ್ಷೆ ಇಲ್ಲದ ಕಾರಣ ಎಸೆಸೆಲ್ಸಿ ಪರೀಕ್ಷೆಗೆ ಸಮಸ್ಯೆಯಾಗುತ್ತಿದೆ. ಅಲ್ಲದೆ, ಖಾಸಗಿ ಶಾಲೆಯವರೂ ಒತ್ತಡ ಹಾಕಿದ್ದಾರೆ. ಈ ಸಂಬಂಧ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುರೇಶ್‌ ಕುಮಾರ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News