'ಶ್ರೀರಾಮುಲು ಡಿಸಿಎಂ' ವಿಚಾರದಲ್ಲಿ ಜನಾರ್ದನ ರೆಡ್ಡಿ ಹೆಸರು ಉಲ್ಲೇಖಿಸಿದ ಸೋಮಶೇಖರ ರೆಡ್ಡಿ

Update: 2019-12-16 11:56 GMT
ಸೋಮಶೇಖರ ರೆಡ್ಡಿ

ಬಳ್ಳಾರಿ, ಡಿ. 16: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಜೊತೆಗಿದ್ದಿದ್ದರೆ ಶ್ರೀರಾಮುಲು ಅವರಿಗೆ ಬೇಗ ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತಿತ್ತು. ಅಲ್ಲದೆ, ಅವರಿಗೆ ರಾಜಕೀಯದಲ್ಲಿ ಮತ್ತಷ್ಟು ಬಲ ಬರುತ್ತಿತ್ತು ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾದ ಅವರು ಉನ್ನತ ಮಟ್ಟದಲ್ಲಿ ಬೆಳೆದಿದ್ದಾರೆ. ಅವರು ಉಪಮುಖ್ಯಮಂತ್ರಿ ಆಗಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿದೆ ಎಂದು ಹೇಳಿದರು.

ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಂಬಂಧ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದ ಅವರು, ಕಾಲಚಕ್ರ ಹೀಗೆಯೇ ಇರುವುದಿಲ್ಲ. ಬದಲಾಗುತ್ತಿರುತ್ತದೆ. ಕೆಳಗಿದ್ದವರು ಮೇಲೆ ಬರಲೇಬೇಕು ಎಂದು ಸೋಮಶೇಖರ ರೆಡ್ಡಿ ಹೇಳಿದರು.

ರಾಜಕೀಯ ಅಂದರೆ ಹೀಗೆಯೇ. 2008ರಲ್ಲಿ ನಾವು ಪ್ರಬಲರಾಗಿದ್ದೆವು. ಈಗಲೂ ಪ್ರಬಲರಾಗಿಯೇ ಇದ್ದೇವೆ. ಭಗವಂತ ನಮ್ಮನ್ನು ದುಬರ್ಲರನ್ನಾಗಿ ಮಾಡಬಹುದೇ ಹೊರತು ಬೇರೆ ಯಾರಿಂದಲೂ ಅದು ಸಾಧ್ಯವಿಲ್ಲ ಎಂದು ಸೋಮಶೇಖರ ರೆಡ್ಡಿ ತಿಳಿಸಿದರು.

ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಬಗ್ಗೆ ಚುನಾವಣೆ ನಂತರ ಯೋಚಿಸುವೆವು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರು. ಜಿಲ್ಲೆ ಅಖಂಡವಾಗಿರಬೇಕೆನ್ನುವುದು ನನ್ನ ನಿಲುವು. ಜಿಲ್ಲೆಯನ್ನು ಒಡೆಯುವುದು ಬೇಡ ಎಂದು ಶಾಸಕ ಆನಂದ್ ಸಿಂಗ್ ಬಳಿ ಮನವಿ ಮಾಡುತ್ತೇನೆ ಎಂದರು.

ಶಾಸಕರಾದ ಕರುಣಾಕರ ರೆಡ್ಡಿ, ಎನ್.ವೈ.ಗೋಪಾಲಕೃಷ್ಣ, ಸೋಮಲಿಂಗಪ್ಪ ಜಿಲ್ಲೆ ಅಖಂಡವಾಗಿರಲಿ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಬಂದವರಲ್ಲಿ ಶೆ.90ರಷ್ಟು ಮುಖಂಡರು ವಿಭಜನೆ ಬೇಡ ಎಂದು ಹೇಳಿದ್ದಾರೆಂದು ಸೋಮಶೇಖರ ರೆಡ್ಡಿ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News