ಬಿಜೆಪಿ ಮುಕ್ತ ಭಾರತ ಮಾಡಲು ಜನತೆ ರಸ್ತೆಗೆ ಇಳಿದಿದ್ದಾರೆ: ವಿ.ಎಸ್.ಉಗ್ರಪ್ಪ

Update: 2019-12-16 13:33 GMT

ಬೆಂಗಳೂರು, ಡಿ.16: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಮಾತುಗಳಲ್ಲಿ ಹತಾಶೆಯ ಭಾವನೆ ಕಾಣುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳಿದ್ದರು. ಆದರೆ, ಇವತ್ತು ಬಿಜೆಪಿ ಮುಕ್ತ ಭಾರತ ಮಾಡಲು ಜನರೇ ರಸ್ತೆಗೆ ಇಳಿದಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಸೋಮವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒರಿಸ್ಸಾ, ದಿಲ್ಲಿ ಮತ್ತು ಜಮ್ಮು ಕಾಶ್ಮೀರ ಸೇರಿದಂತೆ ಅನೇಕ ಕಡೆ ಬಿಜೆಪಿ ಅಧಿಕಾರದಲ್ಲಿ ಇಲ್ಲ. ಭಾರತ್ ಬಚಾವೋ ಆಂದೋಲನದಲ್ಲಿ ಭಾಗಿಯಾಗಿದ್ದ ಜನರ ಪ್ರತಿಕ್ರಿಯೆ ನೋಡಿ ಪ್ರಧಾನಿ ಮನಬಂದಂತೆ ಮಾತನಾಡಿದ್ದಾರೆ ಎಂದು ಕಿಡಿಗಾರಿದರು.

ಗಲಭೆ, ಬೆಂಕಿ ಹಚ್ಚೋದಕ್ಕೆ ಕಾಂಗ್ರೆಸ್ ಕಾರಣ ಅಂತ ಪ್ರಧಾನಿ ಹೇಳುತ್ತಾರೆ. ಬಿಜೆಪಿಯ ಮಾನಸಿಕ ಸ್ಥಿತಿ ಪ್ರಧಾನಿಯ ಹೇಳಿಕೆಯಲ್ಲಿ ಕಾಣುತ್ತಿದೆ. ಮಂಡಲ್ ವರದಿ, ಬಾಬ್ರಿ ಮಸೀದಿ, ಗೋದ್ರಾ ಹತ್ಯಾಕಾಂಡ ವಿಚಾರದಲ್ಲಿ ಬೆಂಕಿ ಹಚ್ಚಿದ್ದು ಯಾರು? ಸಮಾಜದ ಸ್ವಾಸ್ಥ ಕೆಡಿಸೋದಕ್ಕೆ ಆ ರೀತಿ ನಡೆದುಕೊಂಡಿದ್ದು ಯಾರು? ಎಂಬುದು ಜಗಜ್ಜಾಹೀರಾಗಿದೆ ಎಂದು ಉಗ್ರಪ್ಪ ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರ ತೇಜೋವಧೆ ಮಾಡೋದನ್ನ ಮೋದಿ ಬಿಡಬೇಕು. ಅವರ ನೀತಿಗಳಿಂದ ಅವರ ರಾಜ್ಯವೇ ಹಿಡಿತಕ್ಕೆ ಸಿಗುತ್ತಿಲ್ಲ. ಬಡತನ, ನಿರೋದ್ಯೋಗದಿಂದ ಜನ ಹೈರಾಣಾಗಿದ್ದಾರೆ. ಸಂವಿಧಾನದ ಅರಿವು ನಿಮಗೆ ಏನಾದ್ರೂ ಇದೆಯಾ? ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂವಿಧಾನದ ಬಗ್ಗೆ ಅರಿವಿಲ್ಲದೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಬುದ್ಧಿ ಭ್ರಮಣೆ ಆಗಿರುವುದು ರಾಹುಲ್ ಗಾಂಧಿಯವರಿಗೆ ಅಲ್ಲ, ಪ್ರಹ್ಲಾದ್ ಜೋಶಿ ಹಾಗೂ ನರೇಂದ್ರ ಮೋದಿಗೆ. ಅತ್ಯಾಚಾರ ಪ್ರಕರಣಗಳನ್ನು ಮುಂದಿಟ್ಟು ಕೊಂಡು ದಿಲ್ಲಿಯನ್ನು ‘ಅತ್ಯಾಚಾರದ ರಾಜಧಾನಿ’ ಎಂದು ನರೇಂದ್ರ ಮೋದಿ ಕರೆದಿದ್ದರು. ಆದರೆ, ಈಗ ಜನರ ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡುತ್ತಿರುವ ಮೋದಿ, ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಗಲಾಟೆಗಳಾಗಲಿ ಎಂದು ನಾವು ಯಾವತ್ತು ಬಯಸಲ್ಲ. ಬೆಂಕಿ ಹಚ್ಚುವ ಕೆಲಸಗಳಿಗೆ ಕೇಂದ್ರ ಸರಕಾರವೇ ಕಾರಣ. ಮೋದಿ ಉಡಾಫೆಯ ಮಾತುಗಳನ್ನು ಆಡುವುದು ಹಾಗೂ ನಮ್ಮ ನಾಯಕರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ, ಹಣದಿಂದ ಉಪ ಚುನಾವಣೆಯನ್ನು ನಡೆಸಿದ್ದಾರೆ. ವ್ಯವಸ್ಥೆಯ ಮೇಲೆ ಶೇ.75ರಷ್ಟು ಮತದಾರರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಈ ಕಡೆ ಗಮನ ಹರಿಸುತ್ತಿಲ್ಲ. ಮುಕ್ತ, ನಿರ್ಭೀತ ಚುನಾವಣೆಗಳು ನಡೆಯಬೇಕು. ಉಪ ಚುನಾವಣೆಯಲ್ಲಿ 12 ಸ್ಥಾನಗಳು ಗೆಲ್ಲುತ್ತಿದ್ದಂತೆ ಯಡಿಯೂರಪ್ಪ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ ಎಂದು ಉಗ್ರಪ್ಪ ವ್ಯಂಗ್ಯವಾಡಿದರು.

ಎಲ್ಲಿದ್ದೀರಾ ಯಡಿಯೂರಪ್ಪನವರೆ? ನೆರೆ ಪರಿಹಾರಕ್ಕಾಗಿ ಕೇಂದ್ರದಿಂದ 1200 ಕೋಟಿ ರೂ.ಬಂದಿದ್ದಷ್ಟೇ ಗೊತ್ತು. ಆದರೆ, ಏನಾದರೂ ಪರಿಹಾರ ಕಾರ್ಯಗಳು ನಡೆಯುತ್ತಿವೆಯೇ ಎಂಬುದು ಗೊತ್ತಾಗುತ್ತಿಲ್ಲ. ಸಂತ್ರಸ್ತರಿಗೆ ತಲಾ 10 ಸಾವಿರ ರೂ.ನೀಡಲು 203 ಕೋಟಿ ರೂ., ವಸತಿ ಯೋಜನೆಯಡಿ 742 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 1200 ಕೋಟಿ ರೂ., ಕಂದಾಯ ಇಲಾಖೆಯಿಂದ 500 ಕೋಟಿ ರೂ., ಲೋಕೋಪಯೋಗಿ ಇಲಾಖೆಯಿಂದ 300 ಕೋಟಿ ರೂ., ಬೆಳೆ ನಾಶಕ್ಕಾಗಿ 1100 ಕೋಟಿ ರೂ. ಸೇರಿದಂತೆ ಒಟ್ಟಾರೆ 4800 ಕೋಟಿ ರೂ.ಸರಕಾರದಿಂದ ಬಿಡುಗಡೆಯಾಗಿದೆ. ಆದರೆ, ನೆರೆ ಹಾವಳಿಯಿಂದ ಸುಮಾರು ಒಂದು ಲಕ್ಷ ಕೋಟಿ ರೂ.ಗಳಷ್ಟು ಹಾನಿಯಾಗಿದ್ದು, ಬಿಡುಗಡೆಯಾಗಿರುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಇದೇನಾ ಬಿಜೆಪಿ ಸರಕಾರದ ಜನಪರ ಕೆಲಸಗಳು?

-ವಿ.ಎಸ್.ಉಗ್ರಪ್ಪ, ಮಾಜಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News