×
Ad

ಪೌರತ್ವ ಕಾಯ್ದೆಗೆ ವಿರೋಧ: ನಿಷೇಧಾಜ್ಞೆ ನಡುವೆಯೂ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

Update: 2019-12-16 21:03 IST

ಮೈಸೂರು,ಡಿ.16: ನಿಷೇಧಾಜ್ಞೆ ಜಾರಿ ನಡುವೆಯೂ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆ ಜಾರಿ ವಿರೋಧಿಸಿ ಎಸ್‍ಡಿಪಿಐ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಪುರಭವನದ ಆವರಣದಲ್ಲಿ ಸೋಮವಾರ ಎಸ್‍ಡಿಪಿಐ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಆದರೆ ಇಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ 144ನೇ ಸೆಕ್ಷನ್ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

ನಗರದ ಅಶೋಕ ರಸ್ತೆ, ಗಾಂಧಿ ವೃತ್ತ, ಸೇರಿದಂತೆ ಹಲವು ಕಡೆ ಮೆರವಣಿಗೆ, ಬೈಕ್ ರ‍್ಯಾಲಿ, ಪ್ರತಿಭಟನೆ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಆದರೆ ಅದನ್ನು ಲೆಕ್ಕಿಸದೆ ಮುಸ್ಲಿಂ ಲೀಗ್, ಎಸ್‍ಡಿಪಿಐ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ದೇಶದ ಅರ್ಥಿಕತೆ 4.5 ರಷ್ಟು ಕುಸಿದಿದೆ. ಉದ್ಯೋಗ ನೀಡುತ್ತೇವೆ ಎಂಬ ಭರವಸೆ ಹುಸಿಯಾಗಿದೆ. ಆಟೋಮೊಬೈಲ್, ಟೆಕ್ಸ್ ಟೈಲ್ ಕಂಪನಿಗಳು ಮುಚ್ಚುತ್ತಿವೆ. ದೇಶದ ಅರ್ಧ ಭಾಗದಷ್ಟು ಪ್ರದೇಶ ಮಳೆ ಮತ್ತು ಪ್ರವಾಹದಿಂದ ಜನ ನಶಿಸಿ ಹೋಗಿದ್ದಾರೆ. ಇವೆಲ್ಲವನ್ನೂ ಮರೆಮಾಚಲು ಸಂವಿಧಾನ ವಿರೋಧಿ ಪೌರತ್ವ ನಿಷೇಧ ಕಾಯ್ದೆ ಮತ್ತು ಎನ್‍ಆರ್‍ಸಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಎನ್‍ಆರ್‍ಸಿ ಕಾಯ್ದೆಯಿಂದ ಈ ದೇಶದ ಯಾವುದೇ ಪ್ರಜೆಗಳಿಗೆ ಪ್ರಯೋಜನವಿಲ್ಲ. ಅಸ್ಸಾಂನಲ್ಲಿ ನಡೆದ ಎನ್‍ಆರ್‍ಸಿಯಲ್ಲಿ 3.29 ಕೋಟಿ ಜನ ಹೆಸರು ದಾಖಲಿಸಿದ್ದರು. ಅದರಲ್ಲಿ 19 ಲಕ್ಷ ಜನ ಹೊರಗುಳಿದರು. ಕೇವಲ 6 ಲಕ್ಷ ಮುಸಲ್ಮಾನರು, 13 ಲಕ್ಷ ಎಸ್ಸಿ, ಎಸ್ಟಿ ಹಿಂದುಳಿದ ಜನ ಸೇರಿದ್ದಾರೆ. ಅಸ್ಸಾಂನಲ್ಲಿ ನುಸುಳುಕೋರರನ್ನು ಹೊರಹಾಕಬೇಕಿತ್ತು ಎಂದ ಸರ್ಕಾರ ಅವರಿಗೆ ಪೌರತ್ವವನ್ನು ನೀಡುವ ಮೂಲಕ ಅಸ್ಸಾಂ ಜನರಿಗೆ ವಂಚನೆ ಮಾಡಿದೆ. ಕೇವಲ 3.29 ಕೋಟಿ ಜನರನ್ನು ಪೌರತ್ವವ ಕಾಯ್ದೆಯಡಿ ಸೇರಿಸಲು 1600  ಕೋಟಿ ರೂ. ಖರ್ಚು ಮಾಡಿದೆ. ಇನ್ನು 130 ಕೋಟಿ ಜನರನ್ನು ಸೇರಿಸಲು ಎಷ್ಟು ಹಣ ಖರ್ಚಾಗಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ದೇಶದ ಜನ ಈ ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕು ಎಂದು ಮನವಿ ಮಾಡಿದರು.

ಮೌನಕ್ಕೆ ಶರಣಾದ ಪೊಲೀಸರು: ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ತಂಡೋಪ ತಂಡವಾಗಿ ಸ್ಕೂಟರ್, ಬೈಕ್ ಮತ್ತು ಇತರ ವಾಹನಗಳಲ್ಲಿ ಜನರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಇದನ್ನು ಕಂಡ ಪೊಲೀಸರು ಯಾವುದೇ ರೀತಿಯಲ್ಲೂ ಅಡ್ಡಿಪಡಿಸದರೆ ಮೌನವಹಿಸಿದರು. ನಂತರ ಪುರಭವನದ ಒಳಗೆ 20 ನಿಮಿಷ ಕಾಲಾವಕಾಶ ನೀಡಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಯಿತು. ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಿದ್ದರು.

ಪ್ರತಿಭಟನೆಯಲ್ಲಿ ತಬ್ರೇಜ್ ಸೇಠ್, ಅಲೀಂ, ದೇವನೂರು ಪುಟ್ಟನಂಜಯ್ಯ, ದೀಪಕ್, ಪುರುಷೋತ್ತಮ್, ಮಹದೇವು, ಅಕ್ಬರ್, ಸುಹೇಲ್ ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News