ಬಿಎಸ್‌ವೈ ವಿರುದ್ಧ ಆಪರೇಷನ್ ಕಮಲ ಆಡಿಯೋ ಕೇಸ್: ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2019-12-16 15:50 GMT

ಕಲಬುರ್ಗಿ, ಡಿ.16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲದ ಆಡಿಯೋ ಕೇಸ್ ಪ್ರಕರಣದ ವಿಚಾರಣೆಯನ್ನು ಕಲಬುರ್ಗಿ ಹೈಕೋರ್ಟ್ ಜನವರಿ ಮೊದಲ ವಾರಕ್ಕೆ ಮುಂದೂಡಲಾಗಿದೆ. ಬಿಎಸ್‌ವೈ ಆಡಿಯೋ ಕೇಸ್ ಪ್ರಕರಣದ ತಡೆಯಾಜ್ಞೆಗೆ ತೆರವು ಕೋರಿ ಕಲಬುರ್ಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಶರಣಗೌಡ ಕಂದಕೂರ ಅವರ ಅರ್ಜಿ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.

ಎಚ್.ಡಿ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ದೇವದುರ್ಗದ ಐಬಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರಿಂದ ರಾಜೀನಾಮೆ ಕೊಡಿಸುವಂತೆ ಶಾಸಕರ ಶರಣಗೌಡಗೆ ಆಮಿಷವೊಡ್ಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿ ಹೈಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ಮುಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.

ಈ ಪ್ರಕರಣದ ತನಿಖೆ ನಡೆಯದಂತೆ ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಬಿಎಸ್‌ವೈ ಮನವಿಯನ್ನು ಪುರಸ್ಕರಿಸಿದ ಕೋರ್ಟ್, ಈ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿತ್ತು. ಆ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಶರಣಗೌಡ ಕಂದಕೂರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಪರೇಷನ್ ಕಮಲ ನಡೆಸಲು ಹಣದ ಆಮಿಷವೊಡ್ಡಿದ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಶಂಕರಗೌಡ ಕಂದಕೂರ ದೂರು ದಾಖಲಿಸಿದ್ದರು. ಬಿಎಸ್‌ವೈ, ಶಾಸಕ ಶಿವನಗೌಡ ನಾಯಕ್, ಪ್ರೀತಂ ಗೌಡ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿದಾಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿತ್ತು. ಇದೀಗ ಯಡಿಯೂರಪ್ಪ ಸಿಎಂ ಆದ ನಂತರ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ತಮ್ಮ ತಂದೆ ನಾಗನಗೌಡ ಕಂದಕೂರ ಅವರಿಂದ ರಾಜೀನಾಮೆ ಕೊಡಿಸಿದಲ್ಲಿ 10 ಕೋಟಿ ರೂ. ಕೊಡೋದಾಗಿ ಯಡಿಯೂರಪ್ಪ ಆಮಿಷವೊಡ್ಡಿದ್ದರು ಎಂದು ಆರೋಪಿಸಿ ಶರಣಗೌಡ ಕಂದಕೂರ ಅವರು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ದೇವದುರ್ಗ ಐಬಿಯಲ್ಲಿ ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಶಿವನಗೌಡ ನಾಯಕ್, ಪ್ರೀತಮ್ ಗೌಡ ಮೊದಲಾದವರು ತನ್ನೊಂದಿಗೆ ಮಾತನಾಡಿದ ಸಂಭಾಷಣೆಗಳನ್ನು ಶರಣಗೌಡ ಕಂದಕೂರು ರೆಕಾರ್ಡ್ ಮಾಡಿಕೊಂಡಿದ್ದರು. ಈ ರೆಕಾರ್ಡ್ ಆದ ಆಡಿಯೋವನ್ನು ಆಗಿನ ಸಿಎಂ ಕುಮಾರಸ್ವಾಮಿ ಅವರು ಮರುದಿನ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದರು. ಆ ನಂತರ, ಶರಣಗೌಡ ಅವರು ಇಷ್ಟೂ ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News