ಜನಬಲದ ಮುಂದೆ ಖಾಕಿ ಬಲ ನಡೆಯುವುದಿಲ್ಲ: ಪ್ರೊ.ಮಹೇಶ್ ಚಂದ್ರಗುರು

Update: 2019-12-19 08:46 GMT

ಮೈಸೂರು,ಡಿ.16: ನಿಷೇಧಾಜ್ಞೆಯನ್ನು ಧಿಕ್ಕರಿಸಿ ಅಹಿಂಸಾತ್ಮಕ ಪ್ರತಿಭಟನೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುವ ಮೂಲಕ ಜನಬಲದ ಮುಂದೆ ಖಾಕಿ ಬಲ ನಡೆಯುವುದಿಲ್ಲ ಎಂಬುದನ್ನು ಇಂದಿನ ಪ್ರಗತಿಪರರ ಪ್ರತಿಭಟನೆ ದೃಢಪಡಿಸಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ತಿಳಿಸಿದ್ದಾರೆ.

ಪೌರತ್ವ ಕಾಯ್ದೆ ವಿರೋಧಿಸಿ ಮೈಸೂರು ನಗರದಲ್ಲಿ ಪ್ರಗತಿಪರ ಸಂಘಟನೆಗಳು ಪುರಭವನದಲ್ಲಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆ ಬಗ್ಗೆ ಹೇಳಿಕ ನೀಡಿದ ಅವರು, 'ಪುರಭವನದ ಆವರಣವನ್ನು ಹೊರತುಪಡಿಸಿ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಮಂಗಳವಾರ ಮಧ್ಯರಾತ್ರಿ 12 ಗಂಟೆವರೆಗೆ ಜಿಲ್ಲಾಡಳಿತ ಕೋಮುವಾದಿಗಳ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದ ಮೇರೆಗೆ ನಿಷೇಧಾಜ್ಞೆ ಹೊರಡಿಸಿ ಪ್ರತಿಭಟನೆಯನ್ನು ಕುಗ್ಗಿಸುವ ಪ್ರಯತ್ನ ನಡೆಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಪ್ರಗರಿಪರರು ಮತ್ತು ಹೋರಾಟಗಾರರು ನಿಷೇಧಾಜ್ಞೆಯನ್ನು ಧಿಕ್ಕರಿಸಿ ಅಹಿಂಸಾತ್ಮಕ ಪ್ರತಿಭಟನೆಯನ್ನು ಯಶಸ್ವಿಯಾಗಿ ಹಮ್ಮಿಕೊಂಡಿರುವುದರಿಂದ ಜನಬಲದ ಮುಂದೆ ಖಾಕಿ ಬಲ ನಡೆಯುವುದಿಲ್ಲ ಎಂಬುದು ಸಾಭೀತಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ಪ್ರಗತಿಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜನಸಮುದಾಯಗಳನ್ನು ಧರ್ಮ, ಜಾತಿ, ಭಾಷೆ, ಪ್ರದೇಶ ಮೊದಲಾದವುಗಳ ಹೆಸರಿನಲ್ಲಿ ಒಡೆದಾಳುವ ಮೋದಿ, ಅಮಿತ್ ಶಾ ಜೋಡಿ ಇಂದು ಜನರ ನಂಬಿಕೆಗೆ ದ್ರೋಹ ಮಾಡಿ ಸಂವಿಧಾನಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಬಹುತ್ವ ಮತ್ತು ಸಂವಿಧಾನ ಮೌಲ್ಯಗಳನ್ನು ರಕ್ಷಿಸಲು ಹೊರಟಿರುವ ಪ್ರಗತಿಪರ ಹಾಗೂ ಶೋಷಿತ ಸಮುದಾಯಗಳ ಜಾಗೃತಿ, ಸಂಘಟನೆ ಮತ್ತು ಹೋರಾಟಗಳನ್ನು ಹತ್ತಿಕ್ಕುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಅಂಧ ದರ್ಬಾರ್ ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News