ಮತದಾರರ ಪಟ್ಟಿ ಪರಿಷ್ಕರಣೆ: ಪಟ್ಟಿಗೆ ಸೇರಲು ಅಂತಿಮ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

Update: 2019-12-16 16:47 GMT

ಬೆಂಗಳೂರು, ಡಿ.16: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತಿದ್ದು, ಮತದಾರರು ತಮ್ಮ ಹೆಸರು ಸೇರ್ಪಡೆಯಾಗಿರುವುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕೆಂದು ಚುನಾವಣಾ ಆಯೋಗ ಮನವಿ ಮಾಡಿದೆ. 

ಕರಡು ಮತದಾರರ ಪಟ್ಟಿಯನ್ನು ಡಿ.16(ಸೋಮವಾರ) ಬಿಡುಗಡೆ ಮಾಡಿದ್ದು, ಹೆಸರು ಸೇರ್ಪಡೆ, ತಿದ್ದುಪಡಿ ಮಾಡಲು, ಹೆಸರು ತೆಗೆದು ಹಾಕಲು ಹಾಗೂ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಜ.27, 2020ರವರೆಗೆ ಅವಕಾಶವಿದೆ. ಅಂತಿಮವಾಗಿ ಫೆ.7, 2020ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.

ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ಅಧಿಕೃತ ಜಾಲತಾಣ www.ceokarnataka.kar.nic.in ನಲ್ಲಿ ಪಿಡಿಎಫ್ ಆವೃತ್ತಿಯನ್ನು ಹಾಕಲಾಗಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸುವುದು ಹಾಗೂ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೇಮಕವಾಗಿರುವ ಅಧಿಸೂಚಿತ ಮತದಾರರ ನೋಂದಣಾಧಿಕಾರಿಗಳು. ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ನಿಗದಿತ ನಮೂನೆಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಸರು ಸೇರ್ಪಡೆಗೆ ನಮೂನೆ-6 ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ-7ರ ಅರ್ಜಿ ಹಾಗೂ ಮುದ್ರಿತ ನಮೂದುಗಳಲ್ಲಿ ತಿದ್ದುಪಡಿ ಮಾಡಲು ನಮೂನೆ-8ರ ಅರ್ಜಿ ಬಳಸಬೇಕು.

ಪ್ರಜಾ ಪ್ರಾತಿನಿಧ್ಯ ಕಾಯ್ದೆ ಹಾಗೂ ಮತದಾರರ ನೋಂದಣಿ ನಿಯಮಾವಳಿಗಳನ್ವಯ ಎಲ್ಲ ಅರ್ಹ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ನೀಡಲಾಗಿದ್ದು, ಪ್ರಸ್ತುತ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜ.1, 2020ರಡಿ ಸೇರ್ಪಡೆಯಾಗುವ ಎಲ್ಲ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ನೀಡಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News