ಇನ್ನು ಬಿಜೆಪಿ ಮಾತ್ರ ದೇಶವಾಳುತ್ತದೆ: ನಳಿನ್ ಕುಮಾರ್ ಕಟೀಲು

Update: 2019-12-16 17:10 GMT

ದಾವಣಗೆರೆ, ಡಿ.16: ದೇಶದಲ್ಲಿ ಕಾಂಗ್ರೆಸ್ ವೈಚಾರಿಕ, ಬೌದ್ಧಿಕ, ಆಡಳಿತಾತ್ಮಕವಾಗಿ ದಿವಾಳಿಯಾಗಿದೆ. ಇನ್ನು ಏನಿದ್ದರೂ ಬಿಜೆಪಿ ಮಾತ್ರ ದೇಶವಾಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. 

ಸೋಮವಾರ ಇಲ್ಲಿನ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಷ್ಟೋ ವರ್ಷಗಳಿಂದ ಸೋನಿಯಾ ಗಾಂಧಿ ಒಬ್ಬರೇ ಕಾಂಗ್ರೆಸ್ ಅಧ್ಯಕ್ಷೆ. ನಮ್ಮ ಪಕ್ಷದಲ್ಲಿ ಸಾಮಾನ್ಯ ಹಳ್ಳಿ ಹುಡುಗ ರಾಜ್ಯದ ಬಿಜೆಪಿ ಅಧ್ಯಕ್ಷ ಆಗಬಹುದು. ಚಾ ಮಾರುವ ಹುಡುಗ ದೇಶದ ಪ್ರಧಾನಿ ಆಗಬಹುದು. ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಬಿಜೆಪಿಯಲ್ಲಿ ನಾವು ಬೇಡಿದ್ದು ಸಿಗಲ್ಲ. ಕೊಟ್ಟದ್ದು ಸ್ವೀಕರಿಸಿ ಕೆಲಸ ಮಾಡಬೇಕು. ನನಗೆ ಭಾಷಣ ಮಾಡುವ ಹುಚ್ಚು. ಹೀಗಾಗಿ ಬಜರಂಗ ದಳ ಸೇರಲು ಮುಂದಾಗಿದ್ದೆ. ಆದರೆ ಸಂಘ ಪರಿವಾರದವರು ರಾಜಕೀಯ ಮಾಡು ಎಂದು ಬಿಜೆಪಿಗೆ ಸೇರಿಸಿದ್ದರು. ಆದರೆ ಕಾಂಗ್ರೆಸ್ ನಲ್ಲಿ ಇಂತಹ ವಾತಾವರಣ ಇಲ್ಲ. ಅಲ್ಲಿನ ನಾಯಕರು, ಕಾರ್ಯಕರ್ತರು ದಿವಾಳಿ ಆಗಿದ್ದಾರೆ ಎಂದರು.  

ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸ್ ಮುಖಂಡರು ನೀಡುತ್ತಿರುವ ಹೇಳಿಕೆ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಪೌರತ್ವ ಕಾಯ್ದೆ ವಿಷಯದಲ್ಲಿ ಮುಸ್ಲಿಮರ ಪರವಾಗಿ ಕಾಂಗ್ರೆಸ್ ಮೊಸಳೆ ಕಣ್ಣಿರು ಹಾಕುತ್ತಿದೆ. ಗಾಂಧಿ ವಿಚಾರಧಾರೆಗಳನ್ನು ಆಳವಡಿಸಿಕೊಳ್ಳಲಿಲ್ಲ. ಆ ನಿಟ್ಟಿನಲ್ಲಿ ಕಾಂಗ್ರೆಸ್ ದಿವಾಳಿಯತ್ತ ಹೋಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 

ರಾಜ್ಯದಲ್ಲಿ ಮುಂದಿನ ಮೂರುವರೆ ವರ್ಷ ನಮ್ಮದೇ ಸರಕಾರ ಆಡಳಿತ ನಡೆಸುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಗುರಿ. ಈ ಹಿಂದೆ ಸಿಎಂ ಯಡಿಯೂರಪ್ಪ ಅವರು ತೆಗೆದುಕೊಂಡ ಜವಾಬ್ದಾರಿಯನ್ನು ಇಂದು ನಾನು ತೆಗೆದುಕೊಂಡಿದ್ದೇನೆ. ಹಿರಿಯರ ಹಾದಿಯಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

"ದಾವಣಗೆರೆ ಪಾಲಿಕೆ ಆಡಳಿತ ಬಿಜೆಪಿಗೆ"

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ವಲ್ಪ ಹಿನ್ನೆಡೆ ಆಗಿದೆ. ಅದರೆ ಬಿಜೆಪಿ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲಿದೆ ಎಂದ ಅವರು, ಚಿತ್ರರಂಗದಲ್ಲಿ ಕಮಲ್ ಹಾಸನ್ ಸಕಲಕಲವಲ್ಲಭ. ಅದರಂತೆ ರಾಜ್ಯದಲ್ಲಿ ಶಾಸಕ ರೇಣುಕಾಚಾರ್ಯ ಅವರು ಸಕಲಕಲಾವಲ್ಲಭ. ಅವರಿಗೆ ಎಲ್ಲ ಕಲೆಗಳು ಗೊತ್ತಿವೆ ಎಂದು ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಉಪಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಬೇರಿ ಬಾರಿಸಿ ಸರಕಾರ ಸುಭದ್ರ ಮಾಡಿಕೊಂಡಿದ್ದೇವೆ. ಅದರೆ, ಸಚಿವ ಸ್ಥಾನ ನೀಡುವುದು ದೊಡ್ಡ ಸವಾಲಾಗಿದೆ. ಜಿಲ್ಲೆಯಲ್ಲಿ 6 ಬಿಜೆಪಿ ಶಾಸಕರಿದ್ದಾರೆ. ಈ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೇನೆ ಎಂದರು.  

ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಡಿಸಿಎಂ ಸ್ಥಾನ ಅವಶ್ಯಕತೆ ಇಲ್ಲ. ಏನಿದ್ದರೂ ಸಿಎಂ ಒಬ್ಬರೇ ಸಾಕು. ಬಿಜೆಪಿ ಜಾತಿಗೆ ಸೀಮಿತವಾದ ಪಕ್ಷ ಅಲ್ಲ. ಡಿಸಿಎಂ ಸ್ಥಾನ ಬೇಡವೇ ಬೇಡ ಎಂದು ರೇಣುಕಾಚಾರ್ಯ ಹೇಳಿದರು. ಸಚಿವ ಸ್ಥಾನದಲ್ಲಿ ಬೇರೆ ಬೇರೆ ಜಿಲ್ಲೆಗೆ ಅವಕಾಶ ಕೊಟ್ಟಿದ್ದಾರೆ. ದಾವಣಗೆರೆ -ಚಿತ್ರದುರ್ಗಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಜಿಲ್ಲೆಗೆ ಅವಕಾಶ ನೀಡಬೇಕು. ಮೂರು ಬಾರಿ ಶಾಸಕರಾಗಿದ್ದೇನೆ. ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿದರು.   

ಪ್ರತಾಪ ಸಿಂಹಗೆ ಪರೋಕ್ಷ ತಿರುಗೇಟು

ಉಪಚುನಾವಣೆಯಲ್ಲಿ 12 ಸ್ಥಾನ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಹೆಸರು ಕಾರಣ ಎಂಬ ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ಕೊಟ್ಟ ರೇಣುಕಾಚಾರ್ಯ, ನಮ್ಮ ನಾಯಕ ಯಡಿಯೂರಪ್ಪ ಅವರ ಪರಿಶ್ರಮದಿಂದ 12 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ ಎಂದು ಹೇಳಿದರು.  

ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿದ್ದು, 6 ಶಾಸಕರು ಗೆಲುವು ಸಾಧಿಸಿದ್ದಾರೆ. ಒಬ್ಬರು ಸಂಸದ ಇದ್ದಾರೆ. ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಅದ್ದರಿಂದ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.  

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಮಾಡಾಳ ವಿರುಪಾಕ್ಷಪ್ಪ, ಪ್ರೋ.ಎಸ್.ಲಿಂಗಣ್ಣ, ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ್ ನಾಯ್ಕ್ ಸೇರಿದಂತೆ ಜಿಪಂ ಅಧ್ಯಕ್ಷರು, ಪಾಲಿಕೆ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News