ಸಿಎಎ ವಿರುದ್ಧ ದೇಶದ ಪ್ರತಿರೋಧ

Update: 2019-12-16 18:20 GMT

ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ (ಜೆಎಂಐ)ದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಹಿಂಸಾಚಾರದ ವರದಿಗಳು ಉತ್ತರ ಪ್ರದೇಶದ ಅಲಿಗಡ ಮುಸ್ಲಿಮ್ ವಿವಿಯಿಂದ ಹಿಡಿದು ಐಐಟಿ ಮದ್ರಾಸ್‌ವರೆಗೆ ದೇಶಾ ದ್ಯಂತ ವಿದ್ಯಾರ್ಥಿಗಳಲ್ಲಿ ಪ್ರತಿಭಟನೆಯ ಕಿಡಿ ಹೊತ್ತಿಸಿವೆ. ರವಿವಾರ ಸಂಜೆ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ವಿರೋಧಿಸಿ ಜೆಎಂಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದ ಘಟನೆಗಳು ನಡೆದಿದ್ದವು. ಹಿಂಸಾಚಾರದಲ್ಲಿ ತಾವು ಭಾಗಿಯಾಗಿರಲಿಲ್ಲ ಎಂದು ಹೇಳಿರುವ ವಿದ್ಯಾರ್ಥಿಗಳು ಹಿಂಸಾಚಾರಗಳನ್ನು ಖಂಡಿಸಿದ್ದಾರೆ. ವಿವಿ ಆವರಣಕ್ಕೆ ನುಗ್ಗಿದ್ದ ದಿಲ್ಲಿ ಪೊಲೀಸರು ಗುಂಪನ್ನು ನಿಯಂತ್ರಿಸಲು ಅಶ್ರುವಾಯು ಪ್ರಯೋಗ,ಲಾಠಿ ಪ್ರಹಾರ ನಡೆಸಿದ್ದು,ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪೊಲೀಸ್ ಕ್ರೌರ್ಯದ ವರದಿಗಳು ಹೊರಬೀಳುತ್ತಿದ್ದಂತೆ ದೇಶಾದ್ಯಂತ ಪ್ರತಿಭಟನೆಗಿಳಿದಿರುವ ವಿದ್ಯಾರ್ಥಿಗಳು ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor