ನಾಲ್ಕನೇ ಶನಿವಾರ ಸಾರ್ವತ್ರಿಕ ರಜೆ ಘೋಷಣೆಗೆ ಆಗ್ರಹ
ಬೆಂಗಳೂರು, ಡಿ.18: ರಾಜ್ಯದ ಹೈಕೋರ್ಟ್ ಸೇರಿದಂತೆ ಅಧೀನ ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಇಲಾಖೆಗೆ ಪ್ರತಿ ತಿಂಗಳ 4 ನೆ ಶನಿವಾರದ ಸಾರ್ವತ್ರಿಕ ರಜೆಯನ್ನು ರಾಜ್ಯ ಸರಕಾರ ರದ್ದು ಮಾಡಿರುವುದಕ್ಕೆ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಹಿಂದಿನ ರೀತಿಯಲ್ಲಿಯೇ ನಾಲ್ಕನೆ ಶನಿವಾರವನ್ನು ಸಾರ್ವತ್ರಿಕ ರಜಾ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ನೇತೃತ್ವದಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡಿದ್ದು, ಈ ಕುರಿತು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ವಕೀಲರ ಸಂಘದ ಮನವಿಯನ್ನು ಪರಿಗಣಿಸಿ ತಿಂಗಳಿನ ನಾಲ್ಕನೇ ಶನಿವಾರವನ್ನು ರಜೆ ದಿನವನ್ನಾಗಿ 15 ದಿನಗಳೊಳಗೆ ಘೋಷಣೆ ಮಾಡಬೇಕು. ಇಲ್ಲದಿದ್ದಲ್ಲಿ ಜ.11 ರಂದು ನಡೆಯಲಿರುವ ಬೃಹತ್ ಲೋಕ ಅದಾಲತ್ ಅನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸರಕಾರ ವಕೀಲರ ಬೇಡಿಕೆಗಳು ಈಡೇರಿಸದಿದ್ದಲ್ಲಿ, ಜ.25 ರಂದು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸರಕಾರಿ ನೌಕರರಿಗೆ ಪ್ರತಿ ತಿಂಗಳ ನಾಲ್ಕನೇ ಶನಿವಾರವನ್ನು ಸಾರ್ವತ್ರಿಕ ರಜೆ ದಿನವನ್ನಾಗಿ ಘೋಷಿಸಲಾಗಿತ್ತು.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಡಿ.12 ರಂದು ಆದೇಶ ಹೊರಡಿಸಿ, ಹೈಕೋರ್ಟ್ ಹಾಗೂ ಎಲ್ಲ ಅಧೀನ ನ್ಯಾಯಾಲಯ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು, ಸರಕಾರಿ ವಕೀಲರು ಹಾಗೂ ಸದರಿ ನ್ಯಾಯಾಲಯಗಳಲ್ಲಿನ ಪ್ರಕರಣಗಳಿಗೆ ಸಮನ್ವಯಿಸಲು ಹಾಗೂ ನ್ಯಾಯಾಲಯಗಳ ಪ್ರಕರಣಗಳಿಗೆ ಹಾಜರಾಗುವ ಸರಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ನಾಲ್ಕನೇ ಶನಿವಾರದ ರಜೆಯನ್ನು ರದ್ದುಗೊಳಿಸಿ ಆದೇಶಿಸಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ವಕೀಲರ ಸಂಘ ತಿಳಿಸಿದೆ.