ಅಪಾಯದಲ್ಲಿ ಮಾನವ ಹಕ್ಕು

Update: 2019-12-19 05:37 GMT

ಸ್ವಾತಂತ್ರದ ಮೂಲ ಉದ್ದೇಶವೇ ಮಾನವ ಹಕ್ಕುಗಳನ್ನು ಗೌರವಿಸುವುದು. ಬ್ರಿಟಿಷರು ಹೋದಾಕ್ಷಣ ಈ ದೇಶಕ್ಕೆ ಸ್ವಾತಂತ್ರವೇನೋ ಸಿಕ್ಕಿತು. ಆದರೆ ಮಾನವ ಹಕ್ಕುಗಳನ್ನು ಇಲ್ಲಿನ ಪ್ರತಿ ಪ್ರಜೆಯೂ ತನ್ನದಾಗಿಸಿಕೊಂಡಿದ್ದಾನೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಬ್ರಿಟಿಷರು ಈ ನೆಲಕ್ಕೆ ಆಗಮಿಸುವ ಮೊದಲೇ ಇಲ್ಲಿ ಮಾನವ ಹಕ್ಕುಗಳು ದಮನಿಸಲ್ಪಟ್ಟಿದ್ದವು. ಬದುಕುವ ಹಕ್ಕು ಮೇಲ್‌ಜಾತಿಯವನಿಗೂ, ಕೆಳಜಾತಿಯವನಿಗೂ ಒಂದೇ ಆಗಿರಲಿಲ್ಲ. ಶಿಕ್ಷಣ, ಆಹಾರ, ಆರೋಗ್ಯ ಎಲ್ಲದರಲ್ಲೂ ಜಾತಿ ತಳಕು ಹಾಕಿಕೊಂಡಿತ್ತು. ಭಾರತದ ಮಾನವ ಹಕ್ಕು ದಮನಕ್ಕೆ ಬಹುಸುದೀರ್ಘವಾದ ಇತಿಹಾಸವಿದೆ. ಹಿರಿಯ ಚಿಂತಕರೊಬ್ಬರು ಹೇಳುವಂತೆ ‘ಭಾರತದ ಇತಿಹಾಸ, ಸಂಸ್ಕೃತಿ ನಿಂತಿರುವುದೇ ಮಾನವ ಹಕ್ಕಿನ ಗೋರಿಯ ಮೇಲೆ’. ಒಂದೆಡೆ ದೇಶವಿಡೀ ಬ್ರಿಟಿಷರ ವಿರುದ್ಧ ಹೋರಾಡುತ್ತಿರುವಾಗ ಅಂಬೇಡ್ಕರ್ ಜಾತೀಯತೆಯ ವಿರುದ್ಧ ಹೋರಾಟ ನಡೆಸಿದರು. ‘ಬ್ರಿಟಿಷರು ಹೋದಾಕ್ಷಣ ಇಲ್ಲಿನ ದಲಿತರೇನೂ ಸ್ವತಂತ್ರರಾಗುವುದಿಲ್ಲ’ ಎನ್ನುವ ಅರಿವು ಅವರಿಗಿತ್ತು. ಯಾಕೆಂದರೆ ಬ್ರಿಟಿಷರು ಬರುವ ಮೊದಲೇ, ಈ ನೆಲದ ಜನರೇ ಕೆಳಜಾತಿಯ ಬದುಕುವ ಹಕ್ಕನ್ನು ಕಸಿದುಕೊಂಡಿದ್ದರು. ಸಿಕ್ಕಿದ ಸ್ವಾತಂತ್ರ ಅರ್ಥಪೂರ್ಣವಾಗಬೇಕಾದರೆ ಜಾತಿಯ ಹೆಸರಲ್ಲಿ ಘನತೆ ಕಳೆದುಕೊಂಡ ಮಾನವೀಯತೆ ಮತ್ತೆ ಈ ನೆಲದಲ್ಲಿ ಅರಳಬೇಕಾಗಿತ್ತು. ಆದರೆ ಭಾರತದಲ್ಲಿ ಮಾನವ ಹಕ್ಕಿನ ಸ್ಥಿತಿ ದಯನೀಯವಾಗಿದೆ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಕುರಿತಂತೆ ವಿಶ್ವಸಂಸ್ಥೆ ತನ್ನ ಕಣ್ಗಾವಲನ್ನು ನಡೆಸುತ್ತಾ ಬಂದಿದೆ.

ಇರಾಕ್, ಸಿರಿಯ, ಫೆಲೆಸ್ತೀನ್, ರೊಹಿಂಗ್ಯಾ ಸೇರಿದಂತೆ ದೇಶಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ಬೇರೆ ಬೇರೆ ದುಷ್ಪರಿಣಾಮಗಳನ್ನು ಹುಟ್ಟಿಸಿ ಹಾಕುತ್ತಿದೆ. ತನ್ನನ್ನು ತಾನು ನಾಗರಿಕ ಎಂದು ಕರೆದುಕೊಳ್ಳುವ ಸಮಾಜ ಹೆಚ್ಚು ಹೆಚ್ಚು ಅಮಾನವೀಯವಾಗುತ್ತಿರುವುದನ್ನು ಮಾನವ ಹಕ್ಕು ಸಂಘಟನೆಗಳು ಗುರುತಿಸುತ್ತಾ ಬರುತ್ತಿವೆ. ದುರದೃಷ್ಟಕ್ಕೆ ಇಂದು ಭಾರತವೂ ಮಾನವ ಹಕ್ಕು ಉಲ್ಲಂಘನೆಯಲ್ಲಿ ಮುಂಚೂಣಿಯಲ್ಲಿದೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಈ ದೇಶ ಇನ್ನಷ್ಟು ಅರಾಜಕತೆಗೆ ತುತ್ತಾಗುವ ಎಲ್ಲ ಸೂಚನೆಗಳು ಕಾಣುತ್ತಿವೆ ಎಂದು ವಿಶ್ವಸಂಸ್ಥೆಯ ವರದಿಗಳು ಹೇಳುತ್ತಿವೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದ ಬಳಿಕ, ಅದು ಮಾನವ ಹಕ್ಕುಗಳ ಕುರಿತಂತೆ ಗಾಢ ನಿರ್ಲಕ್ಷವನ್ನು ತಾಳಿದೆ.

ಈ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕಣ್ಗಾವಲನ್ನು ನಡೆಸುವುದಕ್ಕಾಗಿಯೇ ಆಯೋಗಗಳಿವೆ. ದುರದೃಷ್ಟಕ್ಕೆ ಮೋದಿ ಪ್ರಧಾನಿಯಾಗಿ ಅಧಿಕಾರ ಹಿಡಿದ ದಿನದಿಂದ ಹತ್ತು ರಾಜ್ಯಗಳಲ್ಲಿ ಮಾನವ ಹಕ್ಕು ಆಯೋಗಕ್ಕೆ ಅಧ್ಯಕ್ಷರನ್ನೇ ನೇಮಕ ಮಾಡಿಲ್ಲ. ಬದಲಿಗೆ ಇರುವ ಮಾನವ ಹಕ್ಕು ಆಯೋಗಗಳನ್ನೂ ಮುಚ್ಚುವ ಆತುರದಲ್ಲಿದೆ ಸರಕಾರ. ಕಾಶ್ಮೀರದಲ್ಲಿ ಸೇನೆಯನ್ನು ನಿಯೋಜಿಸಿ ಅಲ್ಲಿನ ವಿಶೇಷ ಸ್ಥಾನಮಾನಗಳನ್ನು ಕಿತ್ತುಕೊಳ್ಳುವ ಮೊದಲು ಸರಕಾರ ಮಾಡಿದ ಕೆಲಸ, ಮಾನವ ಹಕ್ಕು ಆಯೋಗದ ಕಚೇರಿಯನ್ನು ಮುಚ್ಚುವುದು. ಅಂದರೆ, ಈ ಸರಕಾರದ ಅವಧಿಯಲ್ಲಿ ಆಯೋಗಗಳು ನಿಷ್ಕ್ರಿಯವಾಗುತ್ತಿರುವುದು ಆಕಸ್ಮಿಕ ಅಲ್ಲ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗ ಪರಿಸರಪರವಾಗಿ ಹೋರಾಡುವ ಎನ್‌ಜಿಓ ಸಂಘಟನೆಗಳ ವಿರುದ್ಧ ದಾಳಿ ಮಾಡಿತು. ಪರಿಸರ ವಿರೋಧವಾಗಿರುವ ಆರ್ಥಿಕ ನೀತಿಗಳು ಮುಂದಕ್ಕೆ ಜಾರಿಯಾಗಲಿರುವ ಸೂಚನೆಯಾಗಿತ್ತು ಅದು. ಇದೇ ಸಂದರ್ಭದಲ್ಲಿ ಆದಿವಾಸಿಗಳು, ಬುಡಕಟ್ಟುಗಳ ಜನರ ಪರವಾಗಿ ಹೋರಾಡುವ ಮಾನವ ಹಕ್ಕು ಕಾರ್ಯಕರ್ತರನ್ನು ಅಮಾನವೀಯವಾಗಿ ನಡೆಸಿಕೊಂಡಿತು. ಇಂದು ಅವರು ‘ಅರ್ಬನ್ ನಕ್ಸಲ್’ ಹೆಸರಿನಲ್ಲಿ ಜೈಲಿನಲ್ಲಿದ್ದಾರೆ. ಬೃಹತ್ ಉದ್ಯಮಿಗಳಿಗೆ ಅರಣ್ಯಗಳನ್ನು ತೆರೆದುಕೊಡುವ ಭಾಗವಾಗಿ ಸರಕಾರ ಈ ಕೃತ್ಯವನ್ನು ಎಸಗಿವೆ. ಇದೀಗ ಅದರ ಕೆಂಗಣ್ಣು ನೇರವಾಗಿ ಮಾನವ ಹಕ್ಕು ಆಯೋಗಗಳ ಮೇಲೆ ಬಿದ್ದಿದೆ.

ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಶನಲ್ ಇಂಡಿಯಾ ಬಿಡುಗಡೆ ಮಾಡಿರುವ ವರದಿ ಹೇಳುವಂತೆ, ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‌ಗಡ, ಗೋವಾ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ಮಣಿಪುರ ಮತ್ತು ಮೇಘಾಲಯಗಳಲ್ಲಿಯನ ಮಾನವ ಹಕ್ಕು ಆಯೋಗಗಳಿಗೆ ಅಧ್ಯಕ್ಷರೇ ಇಲ್ಲ. ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿನ ಎನ್‌ಎಚ್‌ಆರ್‌ಸಿಗಳು ಸಂಪೂರ್ಣ ನಿಷ್ಕ್ರಿಯವಾಗಿವೆ. 23 ರಾಜ್ಯ ಆಯೋಗಗಳಿಗೆ ಸದಸ್ಯರಿಗಾಗಿ ಮಂಜೂರಾಗಿದ್ದ 48 ಹುದ್ದೆಗಳ ಪೈಕಿ 23 ಖಾಲಿಯೇ ಉಳಿದಿವೆ. ಈ ದೇಶದ ಮೂರು ರಾಜ್ಯಗಳಲ್ಲಿ ಮಾನವ ಹಕ್ಕು ಆಯೋಗಗಳೇ ಇಲ್ಲ. ಒಂದನ್ನು ಗಮನಿಸಬೇಕು, ಮಣಿಪುರ, ಛತ್ತೀಸ್‌ಗಡ, ಗುಜರಾತ್, ಜಾರ್ಖಂಡ್ ಮೊದಲಾದ ರಾಜ್ಯಗಳು ಮಾನವ ಹಕ್ಕು ಉಲ್ಲಂಘನೆಗಳಿಗಾಗಿಯೇ ಕುಖ್ಯಾತವಾಗಿವೆ. ಗುಜರಾತ್‌ನಲ್ಲಿ ಸರಕಾರವೊಂದರ ನೇತೃತ್ವದಲ್ಲೇ ಹತ್ಯಾಕಾಂಡ ನಡೆಯಿತು. ನಕಲಿ ಎನ್‌ಕೌಂಟರ್‌ಗಳಲ್ಲಿ ಸರಕಾರದ ಉನ್ನತ ವ್ಯಕ್ತಿಗಳು ಆರೋಪಿಗಳಾಗಿ ಸಿಲುಕಿಕೊಂಡರು. ಮಣಿಪುರದಲ್ಲಿ ಸೇನೆಯು ನಕ್ಸಲ್ ದಮನದ ಹೆಸರಿನಲ್ಲಿ ಸ್ಥಳೀಯ ಆದಿವಾಸಿಗಳ ಮೇಲೆ ನಡೆಸುತ್ತಿರುವ ಭಾರೀ ದೌರ್ಜನ್ಯಗಳು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಇಂತಹ ರಾಜ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಮಾನವಹಕ್ಕು ಆಯೋಗಗಳನ್ನು ನಿಷ್ಕ್ರಿಯ ಗೊಳಿಸಲಾಗುತ್ತಿದೆ. ಕೆಲವು ಆಯೋಗಗಳು ದೂರುಗಳನ್ನಷ್ಟೇ ದಾಖಲಿಸಿಕೊಳ್ಳುತ್ತವೆ. ಬರೇ ನೋಟಿಸ್ ನೀಡಿ ಕೈ ಚೆಲ್ಲುತ್ತದೆ. ಯಾಕೆಂದರೆ ಅದರಾಚೆ ಕಾರ್ಯನಿರ್ವಹಿಸಲು ಸರಕಾರವೇ ಅವಕಾಶ ನೀಡುತ್ತಿಲ್ಲ.

ಸದ್ಯ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಹಂತಹಂತವಾಗಿ ಮಾನವ ಹಕ್ಕುಗಳ ಆಯೋಗಗಳನ್ನು ಮುಚ್ಚುವ ಉದ್ದೇಶವನ್ನು ಸರಕಾರ ಹೊಂದಿದಂತಿದೆ. ಯಾಕೆಂದರೆ, ಕೇಂದ್ರ ಸರಕಾರದ ನೇತೃತ್ವದಲ್ಲಿ ಮಾನವ ಹಕ್ಕು ಉಲ್ಲಂಘನೆಗಳಿಗೆ ಯೋಜನೆ ರೂಪುಗೊಳ್ಳುತ್ತಿದೆ. ಸರಕಾರ ನಿಧಾನಕ್ಕೆ ಸರ್ವಾಧಿಕಾರಿಯಾಗಿ ರೂಪಾಂತರ ಹೊಂದುತ್ತಿದೆ. ಪ್ರಜಾಸತ್ತೆ ನಿಧಾನಕ್ಕೆ ಜೀವ ಕಳೆದುಕೊಳ್ಳುತ್ತಿದೆ. ‘ಪೌರತ್ವ ನೋಂದಣಿ’ಯ ಉದ್ದೇಶವೇ ಈ ದೇಶವನ್ನು ಧರ್ಮದ ಆಧಾರದಲ್ಲಿ ಒಡೆದು, ನಿರ್ದಿಷ್ಟ ಸಮುದಾಯದ ಬದುಕುವ ಹಕ್ಕನ್ನು ಕಿತ್ತುಕೊಳ್ಳುವುದು. ಇದೇ ಸಂದರ್ಭದಲ್ಲಿ, ಕೇಂದ್ರ ಸರಕಾರದ ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಆರ್ಥಿಕವಾಗಿ ದೇಶ ಹಿಂಜರಿಕೆಯನ್ನು ಕಂಡಿದೆ. ನೂರಾರು ಉದ್ಯಮಗಳು ಮುಚ್ಚಿವೆ. ಇವೆಲ್ಲ ವೈಫಲ್ಯಗಳನ್ನು ಮುಚ್ಚಿ ಹಾಕುವುದಕ್ಕಾಗಿ ಪೌರತ್ವ ನೋಂದಣಿ ವಿವಾದವನ್ನು ಸರಕಾರ ಮುನ್ನೆಲೆಗೆ ತಂದಿದೆ. ತಮ್ಮ ಬದುಕಿನ ದೈನಂದಿನ ಸಮಸ್ಯೆಗಳಿಗಾಗಿ ಬೀದಿಗಿಳಿಯಬೇಕಾದ ಜನಸಾಮಾನ್ಯರು, ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬೀದಿಗಿಳಿಯಬೇಕಾದಂತಹ ಸನ್ನಿವೇಶವನ್ನು ಸರಕಾರ ಸೃಷ್ಟಿಸಿದೆ.

ಆಧಾರ್ ಕಾರ್ಡ್‌ನ ದೆಸೆಯಿಂದಾಗಿ ರೇಷನ್ ಆಹಾರ ಸಿಗದೇ ಸತ್ತ ಜನರು, ನೋಟು ನಿಷೇಧದಿಂದ ತೊಂದರೆಗೀಡಾಗಿ ಬದುಕು ಕಳೆದುಕೊಂಡವರು, ಜಾತೀಯತೆಯ ಕಾರಣದಿಂದ ದೌರ್ಜನ್ಯಕ್ಕೊಳಗಾದವರು, ಗುಂಪು ಥಳಿತಕ್ಕೆ ಬಲಿಯಾದ ಪ್ರಕರಣಗಳೆಲ್ಲವೂ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯೇ ಆಗಿದೆ. ಆದರೆ ಪೌರತ್ವ ನೋಂದಣಿ ಎನ್ನುವ ಪ್ರಹಸನದ ಮೂಲಕ ಈ ದೇಶದ ಪ್ರಜಾಸತ್ತೆಯ ಆತ್ಮಕ್ಕೇ ಸರಕಾರ ಇರಿಯಲು ಹೊರಟಿದೆ. ಪ್ರಜಾಸತ್ತೆ ಸತ್ತ ಮೇಲೆ, ಮಾನವ ಹಕ್ಕು ಆಯೋಗಗಳಿಗೆ ಅರ್ಥವಾದರೂ ಏನು ಉಳಿಯಿತು? ಒಟ್ಟಿನಲ್ಲಿ ಅಳಿದುಳಿದ ಮಾನವ ಹಕ್ಕು ಅತ್ಯಂತ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಅದನ್ನು ಉಳಿಸಿಕೊಳ್ಳಬೇಕಾದರೆ ಜನರು ಬೀದಿಗಿಳಿಯಲೇಬೇಕು ಎನ್ನುವಂತಹ ಸ್ಥಿತಿಯನ್ನು ಜನರಿಗೆ ಸರಕಾರ ನಿರ್ಮಿಸಿದೆ. ಪೌರತ್ವ ನೋಂದಣಿ ವಿರುದ್ಧದ ಹೋರಾಟ ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತಲೂ ಹಿರಿದಾದುದು. ದಲಿತರು, ಹಿಂದುಳಿದವರ್ಗ, ಅಲ್ಪಸಂಖ್ಯಾತರು ಎಂದಲ್ಲ, ಎಲ್ಲ ಭಾರತೀಯರು ಒಂದಾಗಿ ಧ್ವನಿಯೆತ್ತದೇ ಇದ್ದರೆ, ಮುಂಬಾಗಿಲಲ್ಲಿ ಪಡೆದುಕೊಂಡ ಸ್ವಾತಂತ್ರವನ್ನು ಹಿಂಬಾಗಿಲಲ್ಲಿ ಕಳೆದುಕೊಳ್ಳಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News