×
Ad

ಬ್ರಿಟಿಷರ ಕಾಲದಲ್ಲಿದ್ದಷ್ಟು ಸ್ವಾತಂತ್ರ್ಯವೂ ಬಿಜೆಪಿ ಆಡಳಿತದಲ್ಲಿಲ್ಲ: ಡಿ.ಕೆ ಶಿವಕುಮಾರ್ ವಾಗ್ದಾಳಿ

Update: 2019-12-20 16:38 IST

ಬೆಂಗಳೂರು, ಡಿ.20: ಎಲ್ಲವನ್ನೂ ಶಾಂತಿಯುತವಾಗಿ ನಿಭಾಯಿಸಬೇಕಾದ ಸರ್ಕಾರವೇ ಗಲಭೆಗಳಿಗೆ ಪ್ರಚೋದನೆ ನೀಡುತ್ತಿದೆ. ಹಾಗಾಗಿ ರಾಜ್ಯದಲ್ಲಿ ನಡೆದ ಎಲ್ಲಾ ಗಲಭೆ, ಹಿಂಸಾಚಾರಗಳಿಗೆ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ‌ಗಲಭೆಗಳು ಎಲ್ಲಿ ನಡೆದಿದ್ದವು ? ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದು ಏಕೆ? ನಿಮಗೆ ಈ ಅಧಿಕಾರ ಕೊಟ್ಟಿದ್ದು ಯಾರು? ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು, ಅಲ್ಲಿಗೆ ಪೊಲೀಸರನ್ನು ಕಳಿಸಿ ಪ್ರಚೋದನೆ ನೀಡಿ ಗಲಭೆ ಸೃಷ್ಟಿಸಿದ್ದು ರಾಜ್ಯ ಬಿಜೆಪಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಅಂತಹ ಆಗಬಾರದ್ದು ಏನಾಗಿದೆ ಎಂದು ನಿಷೇಧಾಜ್ಞೆ ಹೇರಿದ್ದೀರಾ? ಯಾರೂ ಪ್ರತಿಭಟನೆ ‌ಮಾಡಬಾರಾ? ಯಾರೂ ಮಾತನಾಡಬಾರದಾ? ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಬಾರದಾ? ಬ್ರಿಟಿಷರ ಕಾಲದಲ್ಲಿ ಕನಿಷ್ಟವಾದರೂ ಸ್ವಾತಂತ್ರ್ಯವಿತ್ತು, ಬಿಜೆಪಿ ಸರ್ಕಾರ ಎಲ್ಲವನ್ನೂ ಕಿತ್ತುಕೊಂಡಿದೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಸತ್ಯಾಂಶದ ವರದಿಗೆ ಮಂಗಳೂರಿಗೆ ಬಂದಿದ್ದ ಮಾಧ್ಯಮದವರನ್ನ ಬಂಧಿಸಿದ್ದು ಸರಿಯಲ್ಲ. ಮಂಗಳೂರು ‌ಪೊಲೀಸ್ ದೌರ್ಜನ್ಯ ಘಟನೆಯನ್ನ ತನಿಖೆಗೆ ಒಳಪಡಿಸಲಿ. ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಇನ್ನಾದರೂ ನರೆಂದ್ರ ಮೋದಿ ಸರಕಾರ ಎಚ್ಚೆತ್ತುಕೊಂಡು ತಿದ್ದುಪಡಿಯನ್ನು ಹಿಂಪಡೆಯಲಿ ಎಂದು ಆಗ್ರಹಿಸಿದ್ದಾರೆ.

ಬಿಜೆಪಿಯವರು ಹುಸಿ ರಾಷ್ಟ್ರಭಕ್ತರು. ಇದಕ್ಕೆ ಇತಿಹಾಸವೇ ಸಾಕ್ಷಿ. ಅವರಲ್ಲಿ ಯಾರೂ ದೇಶಕ್ಕಾಗಿ ಪ್ರಾಣ ಕೊಟ್ಟಿಲ್ಲ. ಇಂಥವರಿಗೆ ನಮ್ಮ ಪೌರತ್ವ ಪ್ರಶ್ನಿಸುವ ನೈತಿಕತೆ ಏನಿದೆ? ದೇಶದ ಐಕ್ಯತೆ, ಸಮಗ್ರತೆಗೆ ಬಲಿದಾನ ಮಾಡಿರುವ ಕಾಂಗ್ರೆಸ್, ಬಿಜೆಪಿಯಿಂದ ಪೌರತ್ವದ ಪಾಠ ಕಲಿಯಬೇಕಿಲ್ಲ. ತಿದ್ದುಪಡಿ ಕಾಯ್ದೆಯನ್ನ ದೇಶದ ಜನರಿಗೆ ಮನವರಿಕೆ ಮಾಡಿಕೊಡದೇ, ಜನರೊಂದಿಗೆ ಚರ್ಚೆ ಮಾಡದೇ, ಬಲವಂತವಾಗಿ ಹೇರುತ್ತಿರುವುದರ ಉದ್ದೇಶ ಏನು? ಕೇಂದ್ರ, ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಇದೆ ಎಂದ ಮಾತ್ರಕ್ಕೆ ಅವರು ಏನುಬೇಕಾದರೂ ಮಾಡಬಹುದು ಎಂದು ಅರ್ಥವೇ? ಭಾರತದಲ್ಲಿ ಇಂಥಹ ಸರ್ವಾಧಿಕಾರ ನಡೆಯದು. ಪೌರತ್ವ ತಿದ್ದಪಡಿ ಕಾಯಿದೆಯಿಂದಾಗಿ ದೇಶ ಹೊತ್ತಿ ಉರಿಯುತ್ತಿದೆ. ಒಂದು ರೀತಿಯ ತುರ್ತುಪರಿಸ್ಥಿತಿ ‌ನಿರ್ಮಾಣವಾಗಿದೆ ಎಂದು ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ, ಅಮಿತ್ ಶಾ ಹಿಟ್ಲರ್, ತುಘಲಕ್ ರಂತೆ ನಡೆದುಕೊಳ್ಳುತ್ತಿದ್ದಾರೆ. ಮಂಗಳೂರು ಘಟನೆ ಬಿಜೆಪಿ ಸರ್ಕಾರದ ಪ್ರಾಯೋಜಿತ ಗಲಭೆ. ವಿದ್ಯಾರ್ಥಿ- ಯುವಜನರು ಬೆಂಗಳೂರು, ಮಂಗಳೂರು, ಕಲಬುರ್ಗಿ ಸೇರಿದಂತೆ ಹಲವೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೂ ಪೊಲೀಸರು ಅಮಾನುಷವಾಗಿ ನಡೆದುಕೊಂಡಿದ್ದಾರೆ. ಪೊಲೀಸರ ಮೂಲಕ ನರೇಂದ್ರ ಮೋದಿ, ಅಮಿತ್ ಶಾ ಅವರು ಹೋರಾಟಗಾರರ ಧ್ವನಿ ಅಡಗಿಸುವ ಪ್ರಯತ್ನ ನಡೆಸಿದ್ದಾರೆ ಎಂದ ಅವರು, ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಕೋರುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯಿದೆ ಹೆಸರಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿವೆ. ಇದು ಖಂಡನೀಯ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News