ಹೋರಾಟಗಾರರ ಸಭೆ ಕರೆಯಲು ಎಚ್.ಕೆ.ಪಾಟೀಲ್ ಒತ್ತಾಯ

Update: 2019-12-21 16:24 GMT

ಬೆಂಗಳೂರು, ಡಿ.21: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಹೊಸ ಸರಕಾರ ಮತ್ತೆ ಗಡಿ ವಿವಾದವನ್ನು ಕೆದಕಿದೆ. ಸುಪ್ರೀಂಕೋರ್ಟ್‌ನಲ್ಲಿ 2004ರಲ್ಲಿ ಮಹಾರಾಷ್ಟ್ರ ಸರಕಾರ ದಾಖಲಿಸಿರುವ ಮೂಲ ದಾವೆಯನ್ನು ಮುಂದುವರೆಸಿಕೊಂಡು ಹೋಗಲು ಮಹಾರಾಷ್ಟ್ರದ ಇಬ್ಬರು ಪ್ರಮುಖ ಸಚಿವರ ಸಮಿತಿಯನ್ನು ಅಲ್ಲಿನ ಸರಕಾರ ರಚಿಸಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ಈ ಸಮಿತಿಗೆ ಎನ್‌ಸಿಪಿ ಮತ್ತು ಶಿವಸೇನೆಯ ಸಚಿವ ಛಗನ್ ಬುಜಬಲ್ ಮತ್ತು ಏಕನಾಥ ಶಿಂಧೆ ಅವರ ಸಮನ್ವಯ ಸಮಿತಿ ಕರ್ನಾಟಕದಲ್ಲಿ ಉಪ ಚುನಾವಣೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ, ನಿಪ್ಪಾಣಿ ಹಾಗೂ ಕಾರವಾರವು ‘ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ’ ಎಂಬ ವಿಭಜನಕಾರಿ ಹಾಗೂ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕವು ಗಡಿ ವಿವಾದದಲ್ಲಿ ಅಗತ್ಯವಾದ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಗಡಿ ಸಂರಕ್ಷಣಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ಕೆ.ಎನ್.ಬೆಂಗೇರಿ, ಜಿನದತ್ತ ದೇಸಾಯಿ, ಎಸ್.ಎಂ.ಕುಲಕರ್ಣಿ ಹಾಗೂ ಬೆಳಗಾವಿಯ ಗಡಿ ವಿವಾದದ ಕುರಿತು ಅಪಾರವಾದ ಮಾಹಿತಿ ಹೊಂದಿರುವ ಅಶೋಕ ಚಂದರಗಿ ಗಡಿ ಪ್ರದೇಶಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ವಿವಾದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಪರವಾದ ಅನೇಕ ವಿವರಗಳನ್ನು ಕಲೆಹಾಕಿ ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹತ್ವದ ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ ಸೂಕ್ತವಾದಂತಹ ಕರ್ನಾಟಕದ ನಿಲುವನ್ನು ಅಂತಿಮಗೊಳಿಸಲು ಹಾಗೂ ತಕ್ಷಣ ಮತ್ತು ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ನಿರ್ಧಾರ ಮಾಡಲು ಗಡಿ ಭಾಗದ ಆಸಕ್ತರ ಮತ್ತು ಹೋರಾಟಗಾರರ ಹಾಗೂ ಈ ಹಿಂದೆ ಗಡಿ ವಿವಾದದ ಕುರಿತು ವಿಶೇಷ ಸೇವೆ ಸಲ್ಲಿಸಿದವರ ಸಭೆಯನ್ನು ತಕ್ಷಣ ಕರೆಯುವಂತೆ ಎಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News