‘ನಾವು ಕಾಗದಪತ್ರ ತೋರಿಸಲಾರೆವು’: ಹಾಸ್ಯ ನಟ ವರುಣ್ ಗ್ರೋವರ್‌ರ ಎನ್‌ಆರ್‌ಸಿ ವಿರೋಧಿ ಕವನ ವೈರಲ್

Update: 2019-12-22 17:35 GMT
ಫೋಟೊ ಕೃಪೆ:  facebook.com/varungrover26

ಹೊಸದಿಲ್ಲಿ, ಡಿ. 22: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆ ಹಾಸ್ಯ ನಟ ಹಾಗೂ ಗೀತರಚನೆಕಾರ ವರುಣ್ ಗ್ರೋವರ್ ಟ್ವೀಟ್ಟರ್‌ನಲ್ಲಿ ಪೋಸ್ಟ್ ಮಾಡಿದ ‘‘ನಾವು ನಮ್ಮ ಕಾಗದಪತ್ರ ತೋರಿಸುವುದಿಲ್ಲ’’ ಎಂಬ ಕವನ ವೈರಲ್ ಆಗಿದೆ.

ಟ್ವಿಟ್ಟರ್‌ನಲ್ಲಿ ಕವಿತೆ ವಾಚಿಸುತ್ತಿರುವ ವೀಡಿಯೊವನ್ನು ಶುಕ್ರವಾರ ಪೋಸ್ಟ್ ಮಾಡಿದ ಗ್ರೋವರ್, ಈ ಕವನ ಪ್ರತಿ ಪ್ರತಿಭಟನಾಕಾರರು ಹಾಗೂ ಭಾರತವನ್ನು ಪ್ರೀತಿಸುವವರ ಉತ್ಸಾಹದಿಂದ ಪ್ರೇರಣೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಗ್ರೋವರ್ ಅವರು ಉರ್ದು ಕವಿ ರಾಹತ್ ಇಂದೋರಿ ಅವರ ಕವನದ ‘ಈ ದೇಶದ ಮಣ್ಣಿನಲ್ಲಿ ಎಲ್ಲರ ರಕ್ತ ಇದೆ’ ಎಂಬ ಜನಪ್ರಿಯ ಸಾಲುಗಳನ್ನು ಕೂಡ ಉಲ್ಲೇಖಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ನಡೆದ ರ್ಯಾಲಿಯಲ್ಲಿ ಇವರ ಬಂಗಾಳಿ ಘೋಷಣೆ ಕೇಳಿ ಬಂದಿತ್ತು. ಈ ಘೋಷಣೆ ‘ನಾವು ಕಾಗದ ಪತ್ರ ತೋರಿಸುವುದಿಲ್ಲ’ ಎಂಬುದನ್ನು ಬ್ಯಾನರಲ್‌ನಲ್ಲಿ ಬರೆಯಲಾಗಿತ್ತು.

 ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ವಿರೋಧಿಸಿ ರಾಷ್ಟ್ರಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಕಾರ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ಪ್ರತಿಭಟಿಸುವ ಈ ಕವನದಲ್ಲಿ ಗ್ರೋವರ್ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೊಳಿಸಿದರೆ ದಾಖಲೆಗಳನ್ನು ತೋರಿಸಲು ನಿರಾಕರಿಸುವುದಾಗಿ ಹೇಳಿದ್ದಾರೆ. ಗ್ರೋವರ್‌ರ ವೀಡಿಯೊವನ್ನು ಪ್ರತಿಪಕ್ಷದ ನಾಯಕರಾದ ಶಶಿ ತರೂರ್ ಹಾಗೂ ಸೀತಾರಾಮ ಯೆಚೂರಿ ರವಿವಾರ ಶೇರ್ ಮಾಡಿದ್ದಾರೆ ಹಾಗೂ ಈ ಕವನ ‘‘ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ’’ ವಿರುದ್ಧದ ರಾಷ್ಟ್ರಗೀತೆ ಎಂದು ಕರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News