ಮಂಗಳೂರು ಪೊಲೀಸ್ ಗೋಲಿಬಾರ್: ಉನ್ನತ ತನಿಖೆಯ ಅಗತ್ಯ

Update: 2019-12-23 05:45 GMT

200 ಮಂದಿ ಪ್ರತಿಭಟನಾಕಾರರ ಗುಂಪನ್ನು ನಿಯಂತ್ರಿಸಲಾಗದೆ ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಮಾನವನ್ನೇ ದೇಶದ ಮುಂದೆ ಹರಾಜಿಗಿಟ್ಟ ಮಂಗಳೂರು ಪೊಲೀಸರ ಶೌರ್ಯಗಳಿಗೆ ಬೆಚ್ಚಿ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಮಂಗಳೂರಿಗೆ ಆಗಮಿಸಬೇಕಾಯಿತು. ಆದರೆ ಸಂಘಪರಿವಾರ ಮುಖಂಡರು ಮತ್ತು ಪೊಲೀಸ್ ಇಲಾಖೆ ಅವರನ್ನು ಮಂಗಳೂರಿನ ಹಿಂಸಾಚಾರ ಕುರಿತಂತೆ ಕತ್ತಲಲ್ಲಿ ಇಡುವಲ್ಲಿ ಯಶಸ್ವಿಯಾದವು. ಆದುದರೆಂದಲೇ ಮುಖ್ಯಮಂತ್ರಿಯ ಮಾತಿನಲ್ಲಿ ಘಟನೆಯ ಕುರಿತ ಗಂಭೀರತೆ ವ್ಯಕ್ತವಾಗಲೇ ಇಲ್ಲ. ಪತ್ರಕರ್ತರ ಬಹುತೇಕ ಪ್ರಶ್ನೆಗಳಿಗೂ ಅವರು ಜಾರಿಕೆಯ ಉತ್ತರವನ್ನು ನೀಡಿದರು. ಕನಿಷ್ಠ ಸ್ಥಳದಲ್ಲೇ ಪರಿಹಾರವನ್ನೂ ಘೋಷಿಸದೆ, ಗಾಯಾಳುಗಳನ್ನು ಭೇಟಿಯೂ ಮಾಡದೆ ನೇರವಾಗಿ ಉಡುಪಿಯತ್ತ ಪಯಣ ಬೆಳೆಸಿದರು. ಮಾಧ್ಯಮಗಳ ಮುಂದೆ ಮುಖ್ಯಮಂತ್ರಿಯವರು ಮಾತನಾಡುವುದಕ್ಕಿಂತ ಸಂಸದೆ ಶೋಭಾ ಕರಂದ್ಲಾಜೆಯವರೇ ಹೆಚ್ಚು ಮಾತನಾಡಿದರು. ಅವರ ಒಟ್ಟು ಮಾತಿನ ಸಾರಾಂಶವೇನೆಂದರೆ ‘ಹಿಂಸಾಚಾರದಲ್ಲಿ ಕಾಂಗ್ರೆಸ್‌ನ ಕೈವಾಡವಿದೆ’. ಹಿಂಸಾಚಾರದಲ್ಲಿ ವಿರೋಧ ಪಕ್ಷದ ಕೈವಾಡವಿದೆ ಎಂದು ಅವರಿಗೆ ಅನುಮಾನವಿದ್ದರೆ ತಕ್ಷಣವೇ ಅವರು ಉನ್ನತ ತನಿಖಾ ಸಂಸ್ಥೆಯಿಂದ ಘಟನೆಯನ್ನು ತನಿಖೆ ಮಾಡಿಸಬೇಕು. ಈವರೆಗೆ ಮಂಗಳೂರು ಹಿಂಸಾಚಾರವನ್ನು ತನಿಖೆ ಮಾಡುವ ಬಗ್ಗೆ ಯಾವ ಹೇಳಿಕೆಯೂ ಸರಕಾರದಿಂದ ಹೊರಬಿದ್ದಿಲ್ಲ. ಜೆಡಿಎಸ್ ಮುಖಂಡ ಕುಮಾರಸ್ವಾಮಿಯವರು ಮಂಗಳೂರಿಗೆ ಆಗಮಿಸಿ, ಸಂತ್ರಸ್ತರಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಿದ ಬಳಿಕವಷ್ಟೇ, ರವಿವಾರ ಯಡಿಯೂರಪ್ಪ ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.

ಮಂಗಳೂರಿನಲ್ಲಿ ಗುರುವಾರ ಸಂಭವಿಸಿರುವ ಹಾನಿಯನ್ನು ಯಾವುದೇ ಹಣದ ಪರಿಹಾರದ ಮೂಲಕ ತುಂಬುವುದಕ್ಕೆ ಸಾಧ್ಯವಿಲ್ಲ. ಘಟನೆಯ ಹಿಂಸಾಚಾರಕ್ಕೆ ಯಾರು ಕಾರಣರೋ ಅವರನ್ನು ಗುರುತಿಸಿ ಅವರಿಗೆ ಶಿಕ್ಷೆಯಾಗದೆ ಸಂತ್ರಸ್ತರಿಗಾಗಲಿ, ಜಿಲ್ಲೆಗಾಗಲಿ ನ್ಯಾಯ ಸಿಗುವುದು ಸಾಧ್ಯವಿಲ್ಲ. ಯಾಕೆಂದರೆ ಪೊಲೀಸರ ಬೇಜವಾಬ್ದಾರಿಗೆ ಇಡೀ ಜಿಲ್ಲೆ ಹಲವು ದಿನಗಳಿಂದ ನರಳುತ್ತಿದೆ. ತಮ್ಮ ಬೇಜವಾಬ್ದಾರಿ ಕೃತ್ಯಗಳನ್ನು ಸಮರ್ಥಿಸಲು ಪೊಲೀಸ್ ಆಯುಕ್ತರೂ ಸೇರಿದಂತೆ ವಿವಿಧ ಅಧಿಕಾರಿಗಳು ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಆದರೆ ಆ ಸುಳ್ಳುಗಳನ್ನು ಸಮರ್ಥಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ನೀಡಿರುವ ಸಮರ್ಥನೆಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಬಾಣಗಳಂತೆ ಎರಗುತ್ತಿವೆ. ಆದರೆ ಅದಕ್ಕೆ ಅವರಿಂದ ವೌನವಷ್ಟೇ ಉತ್ತರವಾಗಿ ಸಿಗುತ್ತಿದೆ. ಅವರ ವೌನವೇ ‘ಮಂಗಳೂರಿನ ಹಿಂಸಾಚಾರದ ಹಿಂದೆ ಯಾರಿದ್ದಾರೆ’ ಎನ್ನುವುದನ್ನು ಹೇಳುತ್ತಿದೆ. ಮಂಗಳೂರಿನಲ್ಲಿ ಪೊಲೀಸರ ನೇತೃತ್ವದಲ್ಲೇ ಭಾರೀ ಮಟ್ಟದ ಮಾನವ ಹಕ್ಕು ಉಲ್ಲಂಘನೆಗಳು ನಡೆದಿವೆ. ನೂರಾರು ಸಂಖ್ಯೆಯಲ್ಲಿ ರೋಗಿಗಳಿರುವ ಆಸ್ಪತ್ರೆಗಳಿಗೆ ಪೊಲೀಸರು ನುಗ್ಗಿ ಅಲ್ಲಿ ಅಶ್ರುವಾಯು ಸಿಡಿಸಿದ್ದಾರೆ. ಐಸಿಯು ಒಳಗೆ ನುಗ್ಗಿ ರೋಗಿಗಳನ್ನು ಕಂಗಾಲುಗೊಳಿಸಿದ್ದಾರೆ. ರೋಗಿಗಳ ಕುಟುಂಬಗಳಿಗೆ ಲಾಠಿಚಾರ್ಜ್ ಮಾಡಿದ್ದಾರೆ. ರೋಗಿಗಳ ಕೊಠಡಿಗಳ ಬಾಗಿಲುಗಳನ್ನು ತುಳಿದಿದ್ದಾರೆ. ಇವೆಲ್ಲವೂ ಪೊಲೀಸರ ಹೇಳಿಕೆಗಳಂತೆ ಬಾಯಿ ಮಾತಿನಲ್ಲಿರುವುದಲ್ಲ. ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿವೆ.

ಗೋಲಿಬಾರ್ ನಡೆಸಿರುವುದಕ್ಕಾಗಿ ಪೊಲೀಸರು ಹಲವು ಕಾರಣಗಳನ್ನು ನೀಡಿದ್ದಾರೆ. ಆ ಕಾರಣಗಳೆಲ್ಲವೂ ಒಂದಕ್ಕೊಂದು ತಾಳೆಯಿಲ್ಲದೆ ಶಂಕೆಗೊಳಗಾಗಿವೆ. ಮುಖ್ಯವಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿರುವ ಅಂಶಗಳೇ ಪೊಲೀಸ್ ಆಯುಕ್ತರನ್ನು ಮುಜುಗರಕ್ಕೀಡು ಮಾಡಿಸಿದೆ. ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಮಾಧ್ಯಮಗಳಿಗೆ, ‘‘ಸುಮಾರು 4,000 ಪ್ರತಿಭಟನಾಕಾರರು ಮಾರಕಾಸ್ತ್ರಗಳೊಂದಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಗೋಲಿಬಾರ್ ನಡೆಸಲಾಯಿತು’’ ಎಂದು ತಿಳಿಸಿದ್ದರು. ಆದರೆ ಇದಾದ ಬಳಿಕ ಡಿಸಿಪಿಯವರು ಬಂದರ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ‘1,500ರಿಂದ 2,000 ಪ್ರತಿಭಟನಾಕಾರರು ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು’ ಎಂದು ನಮೂದಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದಾಖಲಾದ ಇನ್ನೊಂದು ಎಫ್‌ಐಆರ್‌ನಲ್ಲಿ 45 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಮಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 7 ಎಫ್‌ಐಆರ್‌ಗಳು ದಾಖಲಾಗಿದ್ದು ಅವುಗಳಲ್ಲಿ 400 ಮಂದಿ ಅಪರಿಚಿತರನ್ನು ಆರೋಪಿಗಳನ್ನಾಗಿ ಮಾಡಿದೆ. ಹೀಗೆ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗಳೇ ಪೊಲೀಸರ ಹೇಳಿಕೆಗಳನ್ನು ಪ್ರಶ್ನಿಸುವಂತೆ ಮಾಡಿದೆ. ಇದೇ ಸಂದರ್ಭದಲ್ಲಿ ಗುಂಡಿಗೆ ಬಲಿಯಾದ ಇಬ್ಬರೂ ಪ್ರತಿಭಟನೆಗಳಲ್ಲಿ ಭಾಗವಹಿಸಿರಲಿಲ್ಲ, ಜಲೀಲ್ ಎಂಬವರು ಶಾಲೆಯಿಂದ ಬರುವ ತಮ್ಮ ಮಕ್ಕಳಿಗಾಗಿ ಕಾಯುತ್ತಿದ್ದರೆ, ನೌಶೀನ್ ಅವರು ದಿನಗೂಲಿ ಕೆಲಸದಿಂದ ಮನೆಗೆ ಮರಳುತ್ತಿದ್ದರು ಎನ್ನುವುದು ಮಾಧ್ಯಮಗಳಲ್ಲಿ ಉಲ್ಲೇಖವಾಗಿವೆ. ಅವರ ಕುಟುಂಬ ಮೂಲಗಳೂ ಇದನ್ನೇ ಹೇಳುತ್ತಿವೆ.

ಪೊಲೀಸ್ ಠಾಣೆಗೆ ಮಾರಕಾಸ್ತ್ರಗಳ ಜೊತೆಗೆ ಬೆಂಕಿ ಹಚ್ಚಲು ಬಂದಾಗ ಗುಂಡು ಹಾರಿಸಲಾಯಿತು ಎನ್ನುವ ಪೊಲೀಸರ ಹೇಳಿಕೆಯನ್ನೇ ಪ್ರಶ್ನಿಸುವಂತೆ, ಗುಂಡು ದಾಳಿಗೊಳಗಾಗಿ ಬಿದ್ದಿದ್ದ ಮೃತದೇಹಗಳು ಪೊಲೀಸ್ ಠಾಣೆಗಿಂತ ಎಷ್ಟೋ ಮೀಟರ್‌ಗಳಷ್ಟು ದೂರದಲ್ಲಿ ಬಿದ್ದಿದ್ದವು. ಇದೇ ಸಂದರ್ಭದಲ್ಲಿ ಪೊಲೀಸರು ‘ಕೊಂದು ಹಾಕುವ ಉದ್ದೇಶದಿಂದಲೇ ಗುಂಡು ಹಾರಿಸುತ್ತಿರುವ’ ವೀಡಿಯೊ ದೃಶ್ಯಗಳು ಹೊರಬಿದ್ದಿವೆ. ಆದರೆ ಮಾರಕಾಯುಧಗಳನ್ನು ಹೊಂದಿರುವ ಪ್ರತಿಭಟನಾಕಾರರಿರುವ ಯಾವುದೇ ವೀಡಿಯೋಗಳು ಈವರೆಗೆ ಬಿಡುಗಡೆಯಾಗಿಲ್ಲ. ಒಬ್ಬ ಸಿಬ್ಬಂದಿ, ಮೇಲಧಿಕಾರಿಯ ಮನವಿಯನ್ನು ತಿರಸ್ಕರಿಸಿ ‘ಒಂದು ಹೆಣವೂಎ ಬಿದ್ದಿಲ್ಲ ಸಾರ್...ಒಂದು ಬೀಳಲಿ ಸಾರ್...’ ಎನ್ನುತ್ತಾ ಯದ್ವಾತದ್ವಾ ಗುಂಡು ಹಾರಿಸುತ್ತಿರುವ ವೀಡಿಯೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಒಬ್ಬ ಮಾರಕಾಯುಧ ಹೊಂದಿದ್ದ ಪ್ರತಿಭಟನಾಕಾರನಿರುವ ಯಾವ ವೀಡಿಯೋಗಳನ್ನು ಪೊಲೀಸರು ಹೊಂದಿಲ್ಲ. ಹರಿದಾಡುತ್ತಿರುವ ವೀಡಿಯೋಗಳ ಕುರಿತಂತೆ ಪೊಲೀಸರು ಯಾಕೆ ಈವರೆಗೆ ಸ್ಪಷ್ಟೀಕರಣ ನೀಡಿಲ್ಲ? ಪ್ರತಿಭಟನಾಕಾರರು ಪ್ರಯೋಗಿಸಿದ ಮಾರಕಾಯುಧಗಳು ಎಲ್ಲಿ ಹೋದವು? ಪ್ರತಿಭಟನಾಕಾರರ ದಾಳಿಯಿಂದ ಡಿಸಿಪಿ ಸಹಿತ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಕಮಿಶನರ್ ಹೇಳಿಕೆ ನೀಡಿದ್ದಾರೆ. ಅವರು ಯಾವ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು? ಅವರ ಸ್ಥಿತಿ ಈಗ ಹೇಗಿದೆ? ಮಾಧ್ಯಮಗಳ ಮುಂದೆ ಅವರು ಯಾಕೆ ಕಾಣಿಸಿಕೊಂಡಿಲ್ಲ?

ಖಾಸಗಿ ಆಸ್ಪತ್ರೆಯೊಳಗೆ ಪೊಲೀಸರು ಅಶ್ರುವಾಯು ಸಿಡಿಸುವುದಕ್ಕೆ ಕಾರಣವೇನು? ಅಲ್ಲಿಯೂ ಗಲಭೆಗಳು ನಡೆದಿದ್ದವೇ? ನಡೆದಿದ್ದರೆ ಆಸ್ಪತ್ರೆಯ ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಬೇಕಾಗಿತ್ತಲ್ಲ? ಪೊಲೀಸರು ಆಸ್ಪತ್ರೆಯೊಳಗೆ, ಐಸಿಯು ಒಳಗೆ ನುಗ್ಗಿ ನಡೆಸಿದ ದಾಂಧಲೆಗಳ ಸರಣಿಗಳು ಈಗಾಗಲೇ ಬಿಡುಗಡೆಗೊಂಡಿವೆ. ಆದರೆ ಅದರಲ್ಲಿ ಮಾರಕಾಸ್ತ್ರಗಳನ್ನು ಹೊಂದಿರುವ ಒಬ್ಬನೇ ಒಬ್ಬ ಪ್ರತಿಭಟನಾಕಾರ ಕಾಣಿಸಿಕೊಂಡಿಲ್ಲ ಯಾಕೆ? ಇದೇ ಸಂದರ್ಭದಲ್ಲಿ ಒಂದು ವೀಡಿಯೋದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ‘‘ಅಷ್ಟು ಶೂಟ್ ಮಾಡಿದರೂ ಒಬ್ಬನೇ ಒಬ್ಬ ಸಾಯಿಲಿಲ್ವಲ್ಲ?’’ ಎಂದು ಪ್ರಶ್ನಿಸುತ್ತಿದ್ದಾರೆ. ಸಾಯಿಸುವುದು ಪೊಲೀಸರ ಗುರಿಯಾಗಿತ್ತು ಎನ್ನುವುದನ್ನು ಇದು ಹೇಳುವುದಿಲ್ಲವೇ? ಈ ಎಲ್ಲ ಪ್ರಶ್ನೆಗಳನ್ನು ಒಟ್ಟು ಸೇರಿಸಿದಾಗ, ಹಿಂಸಾಚಾರ ಪ್ರತಿಭಟನಾಕಾರರಿಂದ ನಡೆಯಿತೇ? ಪೊಲೀಸರಿಂದ ನಡೆಯಿತೇ? ಎನ್ನುವ ಸಂಶಯವೊಂದು ತಲೆಯೆತ್ತುತ್ತದೆ. ಈ ಕಾರಣದಿಂದಲೇ, ಮಂಗಳೂರು ಗೋಲಿಬಾರ್ ಉನ್ನತ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕಾಗಿದೆ. ಮಾನವ ಹಕ್ಕು ಆಯೋಗಗಳ ತಜ್ಞರು ಅತ್ಯಗತ್ಯವಾಗಿ ಮಂಗಳೂರಿಗೆ ಭೇಟಿ ನೀಡಬೇಕಾಗಿದೆ. ಪೊಲೀಸ್ ಉಡುಪುಗಳ ನಡುವೆ ಬಚ್ಚಿಟ್ಟುಕೊಂಡಿರುವ ದುಷ್ಕರ್ಮಿಗಳನ್ನು ಹುಡುಕಿ ತೆಗೆಯದೇ ಇದ್ದರೆ, ಅದು ಮಂಗಳೂರಿಗೆ ಮಾತ್ರವಲ್ಲ, ಇಡೀ ಕಾನೂನು ವ್ಯವಸ್ಥೆಗೇ ಶಾಶ್ವತವಾದ ಕಳಂಕವನ್ನು ಹಚ್ಚಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News