ಸಿಎಎ-ಎನ್‌ಆರ್‌ಸಿ ವಿರೋಧಿಸಿ ಕೋಲಾರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ

Update: 2019-12-23 16:36 GMT

ಕೋಲಾರ, ಡಿ.23: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯುನ್ನು ವಿರೋಧಿಸಿ ಸಮಾನ ಮನಸ್ಕ ಸಂಘಟನೆಗಳು ಕೋಲಾರ ಜಿಲ್ಲಾ ಅಂಜುಮನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದರು. 

ಇಲ್ಲಿನ ಅಮ್ಮವಾರಿಪೇಟೆಯ ವೃತ್ತದಲ್ಲಿ ಕೋಲಾರ ನಗರದ ವಿವಿಧ ವಾರ್ಡುಗಳಿಂದ ಆಗಮಿಸಿದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ನಗರದ ಪ್ರಮುಖ ಬೀದಿಗಳಲ್ಲಿ ಸೇರಿದ್ದರು. ಬೆಳಗ್ಗೆಯಿಂದಲೇ ಇಡೀ ಕೋಲಾರ ನಗರ ಅಘೋಷಿತ ಬಂದ್ ಪರಿಸ್ಥಿತಿಯಲ್ಲಿತ್ತು. 10 ಗಂಟೆ ವೇಳೆಗೆ ಅಂಜುಮನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆಗೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಬಂಗಾರಪೇಟೆ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಅಮ್ಮವಾರಿ ವೃತ್ತದಲ್ಲಿ ನಿರ್ಮಿಸಿದ್ದ ವೇದಿಕೆಯತ್ತ ತೆರಳಿದರು.

ಕೋಲಾರದ ವಿವಿಧ ವಾರ್ಡ್‍ಗಳಿಂದ, ಸುತ್ತಮುತ್ತಲ ಹಳ್ಳಿಗಳಿಂದ ಸಾವಿರಾರು ಜನ ವೇದಿಕೆಯತ್ತ ಧಾವಿಸಿದರು. ಬೆಳಗ್ಗಿನಿಂದಲೇ ಇಡೀ ನಗರದ ಪ್ರಮುಖ ಬೀದಿಗಳು ಜನ ಓಡಾಟವಿಲ್ಲದೆ, ಎಲ್ಲಿ ನೋಡಿದರೂ ಬರೀ ಪೊಲೀಸರೇ ಕಾಣುತ್ತಿದ್ದರು. ಆದರೆ ಶಾಲಾ ಕಾಲೇಜುಗಳು ಮತ್ತು ಸಾರಿಗೆ ವ್ಯವಸ್ಥೆ ಎಂದಿನಂತೆ ಇತ್ತು. ಸಮಾವೇಶದಲ್ಲಿ ರಾಷ್ಟ್ರದ್ವಜ ಮತ್ತು ಕಪ್ಪು ಬಾವುಟಗಳು ಏಕಾಕಾಲದಲ್ಲಿ ಒಟ್ಟಿಗೆ ಜನರು ಪ್ರದರ್ಶಿಸಿದ್ದು, ರಾಷ್ಟ್ರಗೀತೆ ಹಾಡುವಾಗಲೂ ಕಪ್ಪು ಬಾವುಟ ಹಾರಾಡುತ್ತಿದ್ದು, ಜನರ ಆಕ್ರೋಶವನ್ನು ಎತ್ತಿತೋರಿಸಿದಂತಿತ್ತು. 

ಸಮಾವೇಶಕ್ಕೆ ವಿಧಾನಸಭಾ ಮಾಜಿ ಅಧ್ಯಕ್ಷರಾದ ರಮೇಶ್ ಕುಮಾರ್, ಕೋಲಾರ ಶಾಸಕ ಶ್ರೀನಿವಾಸಗೌಡ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಮಾಜಿ ಸಚಿವ ವರ್ತೂರ್ ಪ್ರಕಾಸ್ ಮೊದಲಾದವರು ಭಾಗವಹಿಸಿ ಎನ್ಆರ್ಸಿ  ಹಾಗೂ ಸಿಎಎ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ, ದೇಶದ ಜನ ಶಾಂತಿಯಿಂದ ಇದ್ದರು ಕೇಂದ್ರ ಸರ್ಕಾರ ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡಲು ಈ ಕಾನೂನುಗಳನ್ನು ತಂದಿದೆ. ಇದು ಸಂವಿಧಾನ ವಿರೋಧಿ ನೀತಿ, ಇಂದು ಇಡೀ ದೇಶದ ಜನ ಡಾ.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಹೋರಾಟ ಮಾಡಬೇಕಿದೆ. ಈ ದೇಶದ ಸಂವಿಧಾನ ಉಳಿವಿಗಾಗಿ, ಅಖಂಡ ಭಾರತದ ಉಳಿವಿಗಾಗಿ, ನಾವು ಜೀವಕೊಟ್ಟಾದರೂ ದೇಶ ಉಳಿಸಬೇಕು ಎಂದು ಕರೆ ನೀಡಿದರು. 

ಪ್ರತಿಭಟನೆಯ ಕೊನೆಯಲ್ಲಿ ಎನ್ಆರ್ಸಿ, ಸಿಎಎ ಬೇಡ, ನಮಗೆ ಆಝಾದಿ ಬೇಕು, ಮನುವಾದಿಗಳಿಂದ ಆಝಾದಿ, ದೇಶದ್ರೋಹಿಗಳಿಂದ ಆಝಾದಿ, ಸಂವಿಧಾನ ವಿರೋಧಿಗಳಿಂದ ಆಝಾದಿ, ಜಾತಿವಾದಿಂದ ಆಝಾದಿ ಹೀಗೇ ಹಲವಾರು ಘೋಷಣೆಗಳನ್ನು ಕೂಗಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ತದನಂತರ ಸಂವಿಧಾನ ವಿರೋಧಿ ಈ ಕಾಯ್ದೆಯನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ರವರ ಮೂಲಕ ವೇದಿಕೆಯಲ್ಲಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕೋಲಾರ ಅಂಜುಮನ್ ಅಧ್ಯಕ್ಷ ಕೆ.ಎಂ. ಜಮೀರ್ ಅಹ್ಮದ್, ಕಾರ್ಯದರ್ಶಿ ಸೈಫುಲ್ಲಾ, ಸದಸ್ಯರಾದ ಹನೀಫ್ ಮೂಸಾನಿ, ಇಕ್ಬಾಲ್, ಮೌಲವಿ ಖಲೀಮುಲ್ಲಾ, ಮೌಲಾನಾ ಷಾ ಘಲೀಬ್, ಖಲೀಲುಲ್ಲಾ, ಮೌಲಾನಾ ಮುಜೀರ್, ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡರಾದ ಎನ್. ಮುನಿಸ್ವಾಮಿ, ಸಿ.ಎಂ.ಮುನಿಯಪ್ಪ, ಸಿಪಿಎಂ ಮುಖಂಡರಾದ ಜಿ.ಸಿ.ಬಯ್ಯಾರೆಡ್ಡಿ, ವಿ.ಗೀತಾ, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್, ವಾಲ್ಮೀಕಿ ಮುಖಂಡ ಅಂಬರೀಶ್, ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ್, ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News