ಸಿಎಎ, ಎನ್‌ಆರ್‌ಸಿ ವಿಚಾರದಲ್ಲಿ ಕಾಂಗ್ರೆಸ್ ನಿಂದ ದೇಶದ್ರೋಹದ ಕೆಲಸ: ಡಿಸಿಎಂ ಕಾರಜೋಳ

Update: 2019-12-23 12:17 GMT

ಬಾಗಲಕೋಟೆ, ಡಿ.23: ಪೌರತ್ವ ಕಾಯ್ದೆ ಜಾರಿ ಕುರಿತಂತೆ ಕಾಂಗ್ರೆಸ್ ಜನಸಾಮಾನ್ಯರಿಗೆ ದಾರಿ ತಪ್ಪಿಸುವ ಮೂಲಕ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಆಂತರಿಕ ಭದ್ರತೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಪೌರತ್ವ ಕಾಯ್ದೆಗೆ ಇಡೀ ಸಂಸತ್ ಒಪ್ಪಿಗೆ ಕೊಟ್ಟಿದೆ. ಆದರೆ, ಮುಸ್ಲಿಮರನ್ನು ವೋಟ್‌ ಬ್ಯಾಂಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಮಾತ್ರ ವಿರೋಧಿಸುತ್ತಿದೆ ಎಂದು ಆರೋಪಿಸಿದೆ.

ಸಿಎಎ ಹಾಗೂ ಎನ್‌ಆರ್‌ಸಿಯಿಂದ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ ದೇಶದಾದ್ಯಂತ ಬೊಬ್ಬೆ ಹೊಡೆದು ಅನಗತ್ಯವಾಗಿ ಶಾಂತಿ ಕದಡುತ್ತಿದೆ. ವೈರಿ ದೇಶಗಳಿಂದ, ಹೊರ ದೇಶಗಳಿಂದ ಅಕ್ರಮವಾಗಿ ಬಂದು ನೆಲೆಸಿದವರನ್ನು ಪತ್ತೆ ಹೆಚ್ಚುವ ಕಾರ್ಯದಲ್ಲಿ ಬಿಜೆಪಿ ನಿರತರಾಗಿದ್ದರೆ, ಅದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಅವರು ಕಿಡಿಕಾರಿದರು.

ಬಿಜೆಪಿಗೆ ದೇಶದ ಭದ್ರತೆ, ಐಕ್ಯತೆ ಹಾಗೂ ಅಭಿವೃದ್ಧಿಯ ಚಿಂತೆಯಾದರೆ, ಕಾಂಗ್ರೆಸ್‌ಗೆ ಬರೀ ವೋಟ್ ಬ್ಯಾಂಕ್‌ನ ಚಿಂತೆಯಾಗಿದೆ. ಈ ಬಗ್ಗೆ ಜನತೆಯೇ ಸೂಕ್ತವಾಗಿ ತೀರ್ಮಾನಿಸಿ ಸರಿಯಾದ ಪಾಠ ಕಲಿಸಲಿದ್ದಾರೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News